ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಅತಿಯಾದ ಕೆಲಸದ ಒತ್ತಡ, ದೈಹಿಕ ಚಟುವಟಿಕೆ ಇಲ್ಲದಿರುವುದು, ಅಸಮತೋಲಿತ ಜೀವನಶೈಲಿಯಿಂದಾಗಿ ಅಧಿಕ ರಕ್ತದೊತ್ತಡ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಆದ್ರೆ, ಇದೀಗ ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿ, ESC ಜರ್ನಲ್ನಲ್ಲಿ ಪ್ರಕಟವಾದ 29 ವರ್ಷಗಳ ಅಧ್ಯಯನದ ವರದಿ ಪ್ರಕಾರ," ಹೆಚ್ಚು ಫಿಟ್ನೆಸ್ ಆಗಿರುವುದರಿಂದ ಅಧಿಕ ರಕ್ತದೊತ್ತಡ ಹೊಂದಿರುವ ಪುರುಷರಲ್ಲಿ ಹೃದಯ ರಕ್ತನಾಳದ ಕಾಯಿಲೆಯಿಂದ ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು" ಎಂಬ ಅಂಶ ಬಹಿರಂಗವಾಗಿದೆ.
"ಇದು ಹೃದ್ರೋಗದ ಕಾಯಿಲೆಯಿಂದ ಸಾಯುವ ಅಪಾಯದ ಕುರಿತು ಫಿಟ್ನೆಸ್ ಮತ್ತು ರಕ್ತದೊತ್ತಡದ ಜಂಟಿ ಪರಿಣಾಮಗಳನ್ನು ಮೌಲ್ಯಮಾಪನ ಮಾಡುವ ಮೊದಲ ಅಧ್ಯಯನವಾಗಿದೆ. ಫಿಟ್ ಆಗಿರುವುದು ಅಧಿಕ ರಕ್ತದೊತ್ತಡದ ಕೆಲವು ಋಣಾತ್ಮಕ ಪರಿಣಾಮಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತದೆ" ಅಂತ ಪೂರ್ವ ಫಿನ್ಲ್ಯಾಂಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜರಿ ಲೌಕಾನೆನ್ ಹೇಳಿದ್ದಾರೆ.
ಪ್ರಪಂಚಾದ್ಯಂತ 30 ರಿಂದ 79 ವರ್ಷ ವಯಸ್ಸಿನ ಸುಮಾರು 1.3 ಶತಕೋಟಿ ವಯಸ್ಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅಧಿಕ ರಕ್ತದೊತ್ತಡವು ಹೃದಯಾಘಾತ ಮತ್ತು ಪಾರ್ಶ್ವವಾಯುಗೆ ಪ್ರಮುಖ ಕಾರಣವಾಗಿದೆ ಎಂದು ಹಿಂದಿನ ಅಧ್ಯಯನಗಳು ತಿಳಿಸಿವೆ. ಈ ಅಧ್ಯಯನ ರಕ್ತದೊತ್ತಡ, ಫಿಟ್ನೆಸ್ ಮತ್ತು ಹೃದಯರಕ್ತನಾಳದ ಕಾಯಿಲೆಯಿಂದ ಸಾವಿನ ಅಪಾಯದ ನಡುವಿನ ಪರಸ್ಪರ ಕ್ರಿಯೆ ಕುರಿತು ಪರಿಶೀಲಿಸಿದೆ. ಇದಕ್ಕೆ ಪೂರ್ವ ಫಿನ್ಲ್ಯಾಂಡ್ನಲ್ಲಿ ವಾಸಿಸುವ 42 ರಿಂದ 61 ವರ್ಷ ವಯಸ್ಸಿನ 2,280 ಪುರುಷರನ್ನು ಬಳಸಿಕೊಳ್ಳಲಾಗಿದೆ.
ಈ ಅಧ್ಯಯನದಲ್ಲಿ ಭಾಗವಹಿಸಿದರವನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಲಾಗಿದೆ: 1) ಸಾಮಾನ್ಯ ರಕ್ತದೊತ್ತಡ ಮತ್ತು ಹೆಚ್ಚಿನ ಫಿಟ್ನೆಸ್ . 2) ಸಾಮಾನ್ಯ ರಕ್ತದೊತ್ತಡ ಮತ್ತು ಕಡಿಮೆ ಫಿಟ್ನೆಸ್. 3) ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿನ ಫಿಟ್ನೆಸ್. 4) ಅಧಿಕ ರಕ್ತದೊತ್ತಡ ಮತ್ತು ಕಡಿಮೆ ಫಿಟ್ನೆಸ್.