ನಿತ್ಯ ಬಹಳಷ್ಟು ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಅದಕ್ಕೆ ಮುಖ್ಯ ಕಾರಣ ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗುವ ಕೊಬ್ಬು. ಕೆಟ್ಟ ಕೊಲೆಸ್ಟ್ರಾಲ್ ಇರುವ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಇಂತಹ ಸಮಸ್ಯೆಗಳು ಕಂಡು ಬರುತ್ತವೆ. ಹಾಗಾಗಿ, ಉತ್ತಮ ಆರೋಗ್ಯ ಹೊಂದಲು ಕೊಲೆಸ್ಟ್ರಾಲ್ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದಕ್ಕೆ ಆಯುರ್ವೇದಲ್ಲಿ ಕೆಲ ಸಲಹೆಗಳಿವೆ.
ಕೊಬ್ಬಿನಾಂಶ ಹೊಂದಿರುವ ಆಹಾರಗಳ ಅತಿಯಾದ ಸೇವನೆ ಮತ್ತು ವ್ಯಾಯಾಮದ ಕೊರತೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುತ್ತದೆ. ಪೌಷ್ಟಿಕಾಂಶದ ಬದಲಿಗೆ ಅನಾರೋಗ್ಯಕರ ಜಂಕ್ ಫುಡ್ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ಸಂಭವಿಸುವ ಅಪಾಯ ಅಧಿಕ. ಈ ಕೆಟ್ಟ ಬೊಜ್ಜು ಕಡಿಮೆ ಮಾಡಲು ಹಲವು ಮಾರ್ಗಗಳಿವೆ. ನಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರಿಂದ ಕೊಬ್ಬು ಕಡಿಮೆ ಮಾಡಬಹುದು.
ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ನಮ್ಮ ಸಾಂಪ್ರದಾಯಿಕ ಆಯುರ್ವೇದದಲ್ಲಿ ಕೆಲವು ಪರಿಹಾರಗಳಿವೆ. ನೀವು ಅವುಗಳನ್ನು ಅನುಸರಿಸಿದರೆ ಬೊಜ್ಜು ಕಡಿಮೆ ಮಾಡಿಕೊಳ್ಳುವುದಲ್ಲದೇ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿಕೊಳ್ಳಬಹುದು. ಹಾಗಾದರೆ, ಆಯುರ್ವೇದದ ಸಲಹೆಗಳು ಯಾವುವು? ಎಂದು ನೋಡೋದಾದರೆ,
ಜೇನು ತುಪ್ಪ:ಕೊಲೆಸ್ಟ್ರಾಲ್ ಕಡಿತಕ್ಕೆ ಜೇನುತುಪ್ಪ ರಾಮಬಾಣ. ಜೇನು ತುಪ್ಪ ಬಳಕೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಿಗೆ ಪ್ರವೇಶಿಸದಂತೆ ತಡೆಯುತ್ತದೆ. ನಿತ್ಯ ಒಂದು ಚಮಚ ಜೇನುತುಪ್ಪ, ನಿಂಬೆ ರಸ ಮತ್ತು ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಕಪ್ ಬಿಸಿ ನೀರಿನಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು.
ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಉಪಕಾರಿ. ಆರರಿಂದ ಎಂಟು ಎಸಳು ಬೆಳ್ಳುಳ್ಳಿ ಪುಡಿಮಾಡಿ ಅದನ್ನು 50 ಮಿಲಿ ಹಾಲು ಮತ್ತು 200 ಮಿಲಿ ನೀರಿನೊಂದಿಗೆ ಸೇರಿಸಿ ಕುದಿಸಿ ಕುಡಿಯುವುದು ಉತ್ತಮ.
ಅರಿಶಿಣ : ಅರಿಶಿಣವು ನಮ್ಮ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಬಿ 6, ಐರನ್, ಕ್ಯಾಲ್ಸಿಯಂ, ಡಯೆಟರಿ ಫೈಬರ್, ಸೋಡಿಯಂ, ಪ್ರೊಟೀನ್, ಸತು, ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.