ಬೆಂಗಳೂರು: ಪ್ರತಿ ವರ್ಷ ಧನ್ತೆರಸ್ ದಿನದಂದು ಆಯುರ್ವೇದ ದಿನವನ್ನೂ ಕೂಡ ಆಚರಿಸಲಾಗುತ್ತದೆ. ಈ ವರ್ಷ ಆಯುರ್ವೇದ ದಿನ ನವೆಂಬರ್ 10ರಂದು ಬಂದಿದೆ. ನಮ್ಮ ಜೀವನ ಮತ್ತು ಆರೋಗ್ಯದಲ್ಲಿ ಆಯುರ್ವೇದದ ಮೌಲ್ಯವನ್ನು ಸಾರುವುದು ಈ ದಿನದ ಉದ್ದೇಶವಾಗಿದೆ.
ಕೇಂದ್ರ ಆಯುಷ್ ಸಚಿವಾಲಯ 100 ವಿವಿಧ ದೇಶಗಳ ಸಚಿವಾಲಯದೊಂದಿಗೆ ಸೇರಿ ಜಾಗತಿಕವಾಗಿ ಈ ದಿನಾಚರಿಸಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ರಾಷ್ಟ್ರೀಯ ಕಾರ್ಯಕ್ರಮವಾಗಿ ರೂಪಿಸಲಾಗಿದ್ದು, 8ನೇ ವರ್ಷದ ಆಯುರ್ವೇದ ದಿನವನ್ನು 'ಪ್ರತಿದಿನ ಪ್ರತಿಯೊಬ್ಬರಿಗೂ ಆಯುರ್ವೇದ' ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ತಿಳಿಸಿದ್ದಾರೆ.
ಆಯುರ್ವೇದ ಮತ್ತು ಪ್ರಯೋಜನದ ಕಲಿಕೆಗೆ ಅವಕಾಶ ನೀಡಲಾಗುವುದು. ಆಯುರ್ವೇದ ಪೂರಕ ಮತ್ತು ಪರ್ಯಾಯ ಔಷಧ ಚಿಕಿತ್ಸೆಯಾಗಿದೆ. ಈ ದಿನದಂದು ಉಚಿತ ಆರೋಗ್ಯ ಶಿಬಿರ, ಸೆಮಿನಾರ್ ಮತ್ತು ಪ್ರದರ್ಶನಗಳನ್ನು ನಡೆಸುವ ಮೂಲಕ ಮಹತ್ವ ಸಾರಲಾಗುತ್ತದೆ.
ಆಯುರ್ವೇದ ಭಾರತದ ಸಂಪ್ರದಾಯಿಕ ಚಿಕಿತ್ಸಾ ಪದ್ದತಿಯಾಗಿದ್ದು, 5 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಈ ಪದ್ಧತಿಯ ಮೂಲಕ ಮಾನವನ ದೇಹದ ಅಂಶಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡುವ ಜೊತೆಗೆ ಪ್ರಕೃತಿಯೊಂದಿಗೆ ಸಮತೋಲನ ಸಾಧಿಸಲಾಗುತ್ತದೆ. ಇಲ್ಲಿ ಗಿಡಮೂಲಿಕೆ ಔಷಧ, ಮಸಾಜ್, ಯೋಗ ಮತ್ತು ಆಹಾರ ಪದ್ಧತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕತೆ ಸೇರಿದಂತೆ ಒಟ್ಟಾರೆ ಯೋಗಕ್ಷೇಮಕ್ಕಿದು ಕಾರಣ ಎಂದು ನಂಬಲಾಗಿದೆ.
ಆಯುರ್ವೇದ ಮೂರು ದೋಷಗಳ ಸಮತೋಲನ ನಡೆಸುವ ಮೂಲಕ ಆರೋಗ್ಯ ಸುಧಾರಿಸುವಲ್ಲಿ ಗಮನಹರಿಸುತ್ತದೆ. ಈ ದೋಷಗಳ ಅಸಮತೋಲನ ರೋಗಕ್ಕೆ ಕಾರಣವಾಗಿದ್ದು, ಅವುಗಳನ್ನು ಪುನರ್ ಸ್ಥಾಪಿಸುವ ಮೂಲಕ ಯೋಗಕ್ಷೇಮ ಕಾಪಾಡುತ್ತದೆ. ಆಯುರ್ವೇದ ಪ್ರಯೋಜನಗಳು ಪ್ರಕೃತಿಯೊಂದಿಗೆ ಸಂಪರ್ಕ, ರೋಗ ತಡೆಗಟ್ಟುವಿಕೆ, ಒತ್ತಡ ಪರಿಹಾರ, ಸುಧಾರಿತ ಜೀರ್ಣ ಕ್ರಿಯೆ ಮತ್ತು ಹೀರಿಕೊಳ್ಳುವಿಕೆ, ಶಿಸ್ತು, ಶಾಂತಿ ಸಂತೋಷ ಹಾಗೂ ದೀರ್ಘಾಯುಷ್ಯ
ಆಯುರ್ವೇದ ದಿನ-ಉದ್ದೇಶಗಳು:
- ಆಯುರ್ವೇದ ಚಿಕಿತ್ಸೆಯನ್ನು ಮುಖ್ಯವಾಹಿನಿಯಲ್ಲಿ ಪ್ರಚಾರ ಮಾಡುವುದು.
- ಚಿಕಿತ್ಸೆಯ ಶಕ್ತಿ ಮತ್ತು ಪ್ರಮುಖಾಂಶಗಳನ್ನು ತಿಳಿಸುವುದು: ಆಯುರ್ವೇದ ವಿಶಿಷ್ಟ ಶಕ್ತಿ ಮತ್ತು ಚಿಕಿತ್ಸೆಯ ಕುರಿತು ಒತ್ತು ನೀಡುವುದು.
- ರೋಗಿಯ ಒತ್ತಡ ಕಡಿಮೆ ಮಾಡುವುದು: ಆಯುರ್ವೇದ ಚಿಕಿತ್ಸೆ ಮೂಲಕ ರೋಗ, ಅನಾರೋಗ್ಯ ಮತ್ತು ಸಾವಿನ ಹೊರೆ ಕಡಿಮೆ ಮಾಡುವುದು.
- ರಾಷ್ಟ್ರೀಯ ಆರೋಗ್ಯ ನೀತಿಗೆ ಕೊಡುಗೆ: ಅಂತರರಾಷ್ಟ್ರೀಯ ಆರೋಗ್ಯ ನೀತಿಗಳು ಮತ್ತು ಕಾರ್ಯಕ್ರಮಗಳಿಗೆ ಆಯುರ್ವೇದದ ಕೊಡುಗೆಯನ್ನು ಅನ್ವೇಷಿಸುವುದು.
- ಜಾಗೃತಿ: ಇಂದಿನ ಪೀಳಿಗೆಗೆ ಆಯುರ್ವೇದ ಚಿಕಿತ್ಸೆಯ ಕುರಿತು ಜಾಗೃತಿ ಮೂಡಿಸುವುದು.
ಇದನ್ನೂ ಓದಿ: ವ್ಯಾಯಾಮ ಮಾಡಿದ್ದರಷ್ಟೇ ಸಾಲದು; ಈ ರೀತಿ ತಿಂದ್ರೆ ಮಾತ್ರ ಫಿಟ್ ಆಗಿರಬಹುದು