ಯಾರು ಎಷ್ಟು ಆಹಾರ ಸೇವನೆ ಮಾಡುತ್ತಾರೆ ಎಂದು ಅಂದಾಜಿಸಿ ಅಡುಗೆ ಮಾಡುವುದು ಸುಲಭವಲ್ಲ. ಅದರಲ್ಲೂ ಹೆಚ್ಚು ಜನರಿಗೆ ಅಡುಗೆ ಮಾಡುವಾಗ ಆಹಾರ ಉಳಿಯುವುದು ಸಾಮಾನ್ಯ. ಉಳಿದ ಅಡುಗೆಯನ್ನು ಹಾಳಾಗದಂತೆ ರೆಫ್ರಿಜರೇಟರ್ನಲ್ಲಿ ಇಡುತ್ತೇವೆ. ಬೇಕಾದಾಗ ಬಿಸಿ ಮಾಡಿ ತಿನ್ನುತ್ತೇವೆ. ಆದರೆ, ಈ ಆಹಾರಗಳು ನಮ್ಮ ಆರೋಗ್ಯಕ್ಕೆ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?. ಪದೇ ಪದೇ ಆಹಾರವನ್ನು ಬಿಸಿ ಮಾಡುವುದರಿಂದ ಆಗುವ ಪೋಷಕಾಂಶ ನಷ್ಟದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.
ಸಮುದ್ರದ ಆಹಾರ: ಶೀತಲೀಕರಿಸಿದ ಸಮುದ್ರದ ಆಹಾರಕ್ಕಿಂತ ತಾಜಾ ಸಮುದ್ರದ ಆಹಾರ ಉತ್ತಮ. ಆದರೆ, ಸಂರಕ್ಷಣಾ ವಿಧಾನವನ್ನು ಆಹಾರ ಸುರಕ್ಷತಾ ಸಂಸ್ಥೆಗಳು ಹೆಚ್ಚು ಬಿಗಿಯಾಗಿ ನಿಯಂತ್ರಿಸುತ್ತವೆ. ಶೀತಲೀಕರಿಸಿದ ಆಹಾರಗಳು ಸುರಕ್ಷಿತ. ಆದರೆ, ಈ ಸಮುದ್ರ ಆಹಾರಗಳಿಂದ ಅಡುಗೆ ಮಾಡಿ, ಅದನ್ನು ಫ್ರಿಜ್ನಲ್ಲಿಟ್ಟು ಪುನಃ ಪುನಃ ಬಿಸಿ ಮಾಡುವುದು ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.
ಅನ್ನ: ಅನ್ನವನ್ನೂ ಕೂಡ ಫ್ರಿಜ್ನಲ್ಲಿ ದೀರ್ಘಾವಧಿ ಕಾಲ ಇಟ್ಟು ಬಿಸಿ ಮಾಡುವುದರಿಂದ ಅದರಲ್ಲಿ ಬ್ಯಸಿಲುಸ್ ಸೆರೆಸ್ ಎಂಬ ಬ್ಯಾಕ್ಟೀರಿಯಾ ಬೆಳೆಯುತ್ತದೆ.
ಪಾಲಕ್: ಅತ್ಯುತ್ತಮ ಆಹಾರವಾದ ಪಾಲಕ್ ಕೂಡ ವಿಷವಾಗುತ್ತದೆ. ಇದನ್ನು ಬಿಸಿ ಮಾಡಿ ಪ್ರಿಜ್ನಲ್ಲಿಟ್ಟು ಬಳಿಕ ಮತ್ತೆ ಬಿಸಿ ಮಾಡಿದರೆ, ಇದರಿಂದ ಆರೋಗ್ಯಕ್ಕೆ ಅಪಾಯವೇ ಹೆಚ್ಚು. ಈ ಪಾಲಕ್ ಅನ್ನು ಅಧಿಕ ತಾಪಮಾನದಲ್ಲಿ ಮತ್ತೆ ಬಿಸಿ ಮಾಡಿದಾಗ ಅವು ನೈಟ್ರೊಸಮೈನ್‌ಗಳಾಗಿ ರೂಪಾಂತರಗೊಳ್ಳುತ್ತವೆ. ಅವುಗಳಲ್ಲಿ ಹೆಚ್ಚಿನವು ಕಾರ್ಸಿನೋಜೆನಿಕ್ ಆಗಿರುತ್ತವೆ.
ಮೊಟ್ಟೆ: ಅಗಾಧ ಪ್ರೊಟೀನ್ ಅಂಶವಿರುವ ಮೊಟ್ಟೆಯನ್ನು ಬಿಸಿ ಮಾಡುವುದು ಅಪಾಯಕಾರಿಯೇ. ಫ್ರೈ ಮಾಡಿದ ಮೊಟ್ಟೆಗಳನ್ನು ತಕ್ಷಣ ತಿನ್ನಬೇಕು. ಅದನ್ನು ಮತ್ತೆ ಬಿಸಿ ಮಾಡಿದರೆ ನೈಟ್ರೋಜನ್ ಆಮ್ಲ ಬಿಡುಗಡೆಯಾಗಿ ಕ್ಯಾನ್ಸರ್ಗೆ ಕಾರಣವಾಗುತ್ತದೆ.