ನವದೆಹಲಿ: ಉತ್ತಮ ಆರೋಗ್ಯಕ್ಕೆ ದಿನಕ್ಕೊಂದು ಮೊಟ್ಟೆ ಸೇವಿಸುವುದು ಉತ್ತಮ ಎಂಬ ಮಾತಿದೆ. ಮೊಟ್ಟೆಗಳು ಪ್ರೋಟೀನ್, ಸೆಲೆನಿಯಮ್, ಸತು, ರಂಜಕ ಮತ್ತು ಕ್ಯಾಲ್ಸಿಯಂ ಸೇರಿದಂತೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವ ಅತ್ಯುತ್ತಮ ಆಹಾರದ ಆಕರವಾಗಿದೆ. ಹೀಗಾಗಿ ಮೊಟ್ಟೆಗೆ ಭಾರತದಲ್ಲಿ ಭಾರಿ ಬೇಡಿಕೆ ಇದೆ.
ಮೊಟ್ಟೆಗಳು ನಿತ್ಯದ ಆಹಾರಕ್ರಮವಾಗಿರುವುದರಿಂದ ಭಾರತೀಯ ಕೋಳಿ ಮಾರುಕಟ್ಟೆಯೂ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಒಂದು ಅಂದಾಜಿನ ಪ್ರಕಾರ, 2021ರಲ್ಲಿ ಭಾರತೀಯ ಕೋಳಿ ಮಾರುಕಟ್ಟೆ ಮೌಲ್ಯವು 1,708 ಶತಕೋಟಿ ತಲುಪಿದೆ. ಅಷ್ಟೇ ಅಲ್ಲ 2027 ರ ವೇಳೆಗೆ 3,170 ಬಿಲಿಯನ್ಗೆ ತಲುಪುತ್ತದೆ ಎಂದು ನಿರೀಕ್ಷಿಸಲಾಗಿದೆ.
ಹಲವು ಸಮಸ್ಯೆಗಳಿಂದ ಬಳಲುತ್ತಿದೆ ಉದ್ಯಮ:ಅದೇನೇ ಇದ್ದರೂ, ಭಾರತೀಯ ಕೋಳಿ ಉದ್ಯಮವು ನೈರ್ಮಲ್ಯ ಮತ್ತು ಗುಣಮಟ್ಟದ ಸಮಸ್ಯೆಗಳಿಂದ ಬಳಲುತ್ತಿದೆ ಎಂದು Ise-Suzuki ಎಗ್ ಇಂಡಿಯಾ ಪ್ರೈ ಲಿಮಿಟೆಡ್ ಸಿಇಒ ಮಿಟ್ಸುಕೊ ತಕಹಸಿ ಹೇಳಿದ್ದಾರೆ. ಮೊಟ್ಟೆಗಳನ್ನು ಹೆಚ್ಚಾಗಿ ಗೊಬ್ಬರದೊಂದಿಗೆ ಇಡಲಾಗುತ್ತದೆ. ಹೀಗಾಗಿ ಸಾಲ್ಮೊನೆಲ್ಲಾ ಮತ್ತು ಇತರ ಬ್ಯಾಕ್ಟೀರಿಯಾಗಳಿಂದ ಈ ಮೊಟ್ಟೆಗಳು ರೋಗಗಳ ಅಪಾಯವನ್ನು ಹೆಚ್ಚು ಮಾಡುತ್ತದೆ ಎನ್ನುತ್ತಾರೆ ಅವರು.
ಭಾರತದಲ್ಲಿ ಕೋಳಿ ಉದ್ಯಮದ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಮತ್ತೊಂದು ಪ್ರಮುಖ ಅಂಶ ಎಂದರೆ, ಸಂಗ್ರಹಣೆ ಮತ್ತು ಸಾಗಣೆಯಂತಹ ಮೂಲ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಇಂತಹ ಸಮಸ್ಯೆಗಳಿಂದ ಮುಕ್ತಿ ಹೊಂದಲು, ಉತ್ತಮ ಮಾರ್ಗವೂ ಇದೆ. ಒಳ್ಳೆಯ ಸುದ್ದಿ ಏನೆಂದರೆ, ಜಪಾನಿನ ತಂತ್ರಜ್ಞಾನದ ಆವಿಷ್ಕಾರಗಳಿಂದ ಭಾರತದಲ್ಲಿ ಮೊಟ್ಟೆಗಳನ್ನು ಉತ್ಪಾದಿಸುವ ಮತ್ತು ಸಾಗಿಸುವ ಪ್ರಕ್ರಿಯೆಯನ್ನು ಮಾರ್ಪಡಿಸಬಹುದು. ಇಂತಹ ವ್ಯವಸ್ಥೆ ಈಗಾಗಲೇ ಆರಂಭವಾಗಿದೆ ಕೂಡಾ. ಕೋಲ್ಡ್ ಚೈನ್ ಎಂಬ ಜಪಾನೀಸ್ ತಂತ್ರಜ್ಞಾನದಿಂದ ಅಪಾರ ಪ್ರಯೋಜನಗಳನ್ನು ಪಡೆಯಲಾಗುತ್ತಿದೆ.
ಏನಿದು ಕೋಲ್ಡ್ ಚೈನ್ ಮೊಟ್ಟೆ:ಉಷ್ಣವಲಯದ ಹವಾಮಾನದಲ್ಲಿರುವ ಪ್ರದೇಶಗಳಲ್ಲಿ ಮೊಟ್ಟೆಗಳನ್ನು ಕಡಿಮೆ ತಾಪಮಾನದಲ್ಲಿ ಶೇಖರಣೆ ಮಾಡಿಟ್ಟಕೊಳ್ಳಬೇಕು. ಆಗ ಮಾತ್ರವೇ ಮೊಟ್ಟಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು. ಆದರೆ ಡೈರಿ ಮತ್ತು ಕೋಳಿ ಉತ್ಪನ್ನಗಳ ರೀತಿಯಲ್ಲಿಯೇ ಮೊಟ್ಟೆಗಳನ್ನು ಕೋಲ್ಡ್ ಸ್ಟೋರೇಜ್ಗಳ ಮೂಲಕ ಸಾಗಿಸಲಾಗುವುದಿಲ್ಲ.
ತೊಳೆಯದ ಮೊಟ್ಟೆಗಳು ಮಾತ್ರ ಕೋಣೆಯ ಉಷ್ಣಾಂಶದಲ್ಲಿ ದೀರ್ಘಾವಧಿ ಬಾಳಿಕೆ ಬರುತ್ತವೆ. ಮೊಟ್ಟೆಯ ಗುಣಮಟ್ಟವು ಅವುಗಳನ್ನು ತೊಳೆದ ಕ್ಷಣದಲ್ಲಿ ಕ್ಷೀಣಿಸಲು ಪ್ರಾರಂಭಿಸುತ್ತದೆ. ಮೊಟ್ಟೆಯ ಚಿಪ್ಪುಗಳು ರಂಧ್ರಗಳಿಂದ ಕೂಡಿರುತ್ತವೆ. ಮೊಟ್ಟೆಗಳಿಗೆ 'ಬ್ಲೂಮ್' ಎಂಬ ಸೂಕ್ಷ್ಮ ಪೊರೆಯ ಲೇಪನ ಹೊಂದಿರುತ್ತದೆ. ಮರಿಗಳನ್ನು ಮಾಡಲು ಅವುಗಳ ಪರಿಸರ ಸ್ವಚ್ಛ ಹಾಗೂ ಸುರಕ್ಷಿತವಾಗಿರಬೇಕು. ಒಣಗಿದ ಹಾಗೂ ತೊಳೆಯದ ಮೊಟ್ಟೆಯೊಳಗೆ ಬ್ಯಾಕ್ಟೀರಿಯಾಗಳು ಪ್ರವೇಶಿಸಲು ಕಷ್ಟವಾಗುತ್ತದೆ ಎನ್ನುತ್ತಾರೆ ಮಿತ್ಸುಕೊ.