ಋತುಚಕ್ರದ ನೋವು ಕೆಲವರಿಗೆ ಸಾಮಾನ್ಯವಾದರೆ, ಮತ್ತೆ ಕೆಲವರಿಗೆ ಅಸಾಮಾನ್ಯ. ಈ ಸಮಯದಲ್ಲಿ ಉಂಟಾಗುವ ತೀವ್ರತರದ ನೋವಿಗೆ ಕೆಲವೊಮ್ಮೆ ನೋವು ನಿವಾರಕಗಳನ್ನು ಸೇವಿಸಿ, ಉಪಶಮನ ಮಾಡಿಕೊಳ್ಳುವುದುಂಟು. ಆದರೆ ತಜ್ಞರು ಹೇಳುವ ಪ್ರಕಾರ, ಈ ನೋವಿಗೆ ಇತರೆ ಸಮಸ್ಯೆಗಳೂ ಕೂಡ ಕಾರಣವಾಗುತ್ತವೆ. ಇದಕ್ಕೆ ಸೂಕ್ತ ಚಿಕಿತ್ಸೆ ಬೇಕೇಬೇಕು. ಮಾತ್ರೆಗಳ ಹೊರತಾದ ಕೆಲವು ಪರ್ಯಾಯ ಚಿಕಿತ್ಸೆಗಳು ಅಗತ್ಯ. ಇವುಗಳ ಪೈಕಿ ಒಂದು ಜಲ ಚಿಕಿತ್ಸೆ. ಇದು ಋತುಚಕ್ರದ ಸಮಯದ ನೋವನ್ನು ಯಾವುದೇ ಅಡ್ಡ ಪರಿಣಾಮವಿಲ್ಲದೇ ವಾಸಿ ಮಾಡಬಲ್ಲದು.
ಯಾಕೆ ಈ ನೋವು?:ಋತುಚಕ್ರದ ಅವಧಿಯಲ್ಲಿ ಎಲ್ಲರಿಗೂ ನೋವು ಕಂಡುಬರುವುದಿಲ್ಲ. ಆದರೆ, ಕೆಲವರು ಯಾತನಾಮಯ ನೋವು ಅನುಭವಿಸುತ್ತಾರೆ. ಋತುಚಕ್ರದ ಸಮಯದಲ್ಲಿ ಕೆಲವು ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಗರ್ಭಾಶಯದ ಸ್ನಾಯುಗಳು ಹೆಚ್ಚಿನ ಒತ್ತಡ ಹಾಕುವ ಹಿನ್ನೆಲೆಯಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ಋತುಚಕ್ರದ ಸಂದರ್ಭದಲ್ಲಿ ರಕ್ತ ಗರ್ಭಾಶಯದಲ್ಲಿ ನಿಧಾನವಾಗಿ ಹರಿದು, ಕೆಳ ಹೊಟ್ಟೆಯಲ್ಲಿ ನೋವು ಹೆಚ್ಚಿಸುತ್ತದೆ. ಇದರಿಂದ ಪರಿಹಾರ ಕಾಣಬೇಕು ಎಂದರೆ ಸೊಂಟದ ಪ್ರದೇಶದ ಸ್ನಾಯುಗಳನ್ನು ಬಲಗೊಳಿಸುವ ವ್ಯಾಯಾಮಕ್ಕೆ ಹೆಚ್ಚು ಗಮನ ಹರಿಸಬೇಕು.
ಜಲ ಚಿಕಿತ್ಸೆ ಈ ರೀತಿಯ ಒಂದು ವ್ಯಾಯಾಮ. ಇದರ ಭಾಗವಾಗಿ ಯೋಗ, ಏರೋಬಿಕ್ಸ್, ಪೈಲಟ್ಸ್ ಮುಂತಾದವುಗಳನ್ನು ನಡೆಸಬಹುದು. ಜಲ ಚಿಕಿತ್ಸೆಯ ಅಂಗವಾಗಿ ಒಂದು ಸಣ್ಣ ಕೊಳದಲ್ಲಿ ಬಿಸಿನೀರು ತುಂಬಿಸಿ, ಅದರಲ್ಲಿ ದೇಹವನ್ನು ಆರಾಮಗಿರಲಿ ಬಿಡಿ. ಈ ವ್ಯಾಯಾಮದಿಂದ ದೇಹದಲ್ಲಿನ ನೈಸರ್ಗಿಕ ನೋವು ನಿವಾರಕ ಎಂಡೋರ್ಫಿನ್ ಬಿಡುಗಡೆಯಾಗುತ್ತದೆ. ಅಷ್ಟೇ ಅಲ್ಲ, ರಕ್ತದ ಸಂಚಾರ ಉತ್ತಮವಾಗುತ್ತದೆ. ಇದರ ಫಲಿತಾಂಶವೇ ಋತುಚಕ್ರದ ನೋವಿನಿಂದ ಮುಕ್ತಿ!.
ಅನೇಕ ಲಾಭಗಳು: ಬಿಸಿನೀರಿನ ಜಲ ವ್ಯಾಯಾಮ ದೇಹಕ್ಕೆ ದೈಹಿಕ ಮತ್ತು ಮಾನಸಿಕವಾಗಿ ಅನೇಕ ಲಾಭ ತರುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಬಿಸಿನೀರಿನಲ್ಲಿನ ದೇಹವನ್ನಿಡುವುದರಿಂದ ರಕ್ತದ ಪರಿಚಲನೆ ಅಭಿವೃದ್ಧಿಯಾಗುತ್ತದೆ. ಈ ಮುಖೇನ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ. ಹೆಚ್ಚಾಗಿ ಗರ್ಭಾಶಯದ ಸ್ನಾಯುಗಳ ಮೇಲಿನ ಒತ್ತಡ ತಗ್ಗಿ ನೋವು ನಿವಾರಣೆಯಾಗುತ್ತದೆ.