ಆಲಪ್ಪುಳ: ಕೇರಳದ 15ವರ್ಷ ವಯಸ್ಸಿನ ಬಾಲಕನ ಸಾವು ಇದೀಗ ವೈದ್ಯಲೋಕ ಸೇರಿದಂತೆ ಜನಸಾಮಾನ್ಯರಲ್ಲಿ ಆತಂಕ ಮತ್ತು ಭೀತಿ ಮೂಡಿಸಿದೆ. ಇಲ್ಲಿನ ಆಲಪ್ಪುಳ ಜಿಲ್ಲೆಯ ಪನವಲ್ಲಿ ಪಂಚಾಯತ್ನ 15 ವರ್ಷದ ಬಾಲಕನ ಸಾವಿಗೆ ಕಾರಣ ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್. ಈ ಬಾಲಕನ ಮೆದುಳು ಕಲುಷಿತ ನೀರಿನಲ್ಲಿ ಜೀವಿಸುವ ಜೀವಂತ ಅಮೀಬಾದ ಸೋಂಕಿಗೆ ಒಳಗಾಗಿದೆ. ಮೂಗಿನ ಮೂಲಕ ದೇಹ ಹೊಕ್ಕ ಜೀವಂತ ಅಮೀಬಾ ಮೆದುಳನ್ನು ತಿಂದು ಹಾಕಿದೆ. ಈ ಮೆದುಳು ಸೋಂಕಿನಿಂದ ಆತ ಸಾವನ್ನಪ್ಪಿದ್ದಾನೆ ಎಂದು ಆರೋಗ್ಯ ಸಚಿವಾರಾದ ವೀಣಾ ಜಾರ್ಜ್ ಕೂಡ ಮಾಹಿತಿ ನೀಡಿದ್ದಾರೆ.
ಏನಿದು ಘಟನೆ:ಅನಿಲ್ ಕುಮಾರ್ ಮತ್ತು ಶಾಲಿನಿ ದಂಪತಿಯಾಗಿರುವ 15 ವರ್ಷದ ಗುರುದತ್ ಸಾವನ್ನಪ್ಪಿರುವ ಬಾಲಕ. 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಕಳೆದ ಭಾನುವಾರ ಆಳಪ್ಪುಳ ಮೆಡಿಕಲ್ ಕಾಲೇಜ್ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದು, ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ರೀತಿ ಪ್ರಕರಣ ಕೇರಳದಲ್ಲಿ ಮೊದಲಲ್ಲ. ಈ ಹಿಂದೆ ಕೂಡ ಇದೇ ರೀತಿಯ ಐದು ಅಪರೂಪದ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ ಎಂದು ಸಚಿವರು ಮಾಹಿತಿ ನೀಡಿದರು.
ಮೊದಲ ಪ್ರಕರಣ: 2016ರಲ್ಲಿ ಆಲಪ್ಪುಳದ ತಿರುಮಲ ವಾರ್ಡ್ನಲ್ಲಿ ಮೊದಲು ದಾಖಲಾಗಿತ್ತು. ಇದಾದ ಬಳಿಕ 2019 ಮತ್ತು 2020ರಲ್ಲಿ ಮಲಪ್ಪುರಂನಲ್ಲಿ ಮತ್ತೆ ಎರಡು ಪ್ರಕರಣಗಳು ದಾಖಲಾದವು. ಇದಾದ ಬಳಿಕ 2020ರಲ್ಲಿ ಕಾಜಿಗೋಡ್ ಮತ್ತು 2022ರಲ್ಲಿ ತ್ರಿಸ್ಸೂರಿನಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ರೋಗದ ಪ್ರಮುಖ ಲಕ್ಷಣ ಎಂದರೆ, ಜ್ವರ, ತಲೆನೋವು, ವಾಂತಿ ಮತ್ತು ಸೀನುವಿಕೆ. ಕಲುಷಿತ ನೀರಿಗೆ ತೆರೆದುಕೊಂಡ ಒಂದರಿಂದ ಎರಡು ವಾರದಲ್ಲಿ ಈ ರೀತಿಯ ಲಕ್ಷಣಗಳು ಪತ್ತೆಯಾಗುತ್ತವೆ. ಕೆಲವು ವೇಳೆ ಮೊದಲ ಲಕ್ಷಣದಲ್ಲೇ ವಾಸನೆ ಅಥವಾ ರುಚಿಯನ್ನು ಕಳೆದುಕೊಳ್ಳಬಹುದು.