ಕರ್ನಾಟಕ

karnataka

ETV Bharat / sukhibhava

ಮಂಕಿಪಾಕ್ಸ್​ ಹೇಗೆ ಹರಡುತ್ತದೆ? ಇದೆಷ್ಟು ಅಪಾಯಕಾರಿ? - ಮಂಕಿಪಾಕ್ಸ್​ ಮುಂಜಾಗ್ರತಾ ಕ್ರಮಗಳು

ದೇಶದಲ್ಲಿ ಈಗ ಎರಡನೇ ಮಂಕಿಪಾಕ್ಸ್​ ಪ್ರಕರಣ ಪತ್ತೆಯಾಗಿರುವುದರಿಂದ ಜನತೆಯಲ್ಲಿ ನಿಧಾನವಾಗಿ ಭಯ ಆವರಿಸಿಕೊಳ್ಳುತ್ತಿದೆ. ಆದರೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸೋಂಕು ಹರಡದಂತೆ ತಡೆಯಬಹುದು.

All you need to know about Monkeypox infection!
All you need to know about Monkeypox infection!

By

Published : Jul 19, 2022, 4:26 PM IST

ಜುಲೈ 18ರಂದು ಕೇರಳದ ಕಣ್ಣೂರಿನಲ್ಲಿ ಭಾರತದ ಎರಡನೇ ಮಂಕಿಪಾಕ್ಸ್​ ಪ್ರಕರಣ ಪತ್ತೆಯಾಗಿದೆ. 31 ವರ್ಷದ ವ್ಯಕ್ತಿಯೊಬ್ಬನಿಗೆ ಸೋಂಕು ಕಾಣಿಸಿಕೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭಾರತದ ಪ್ರಥಮ ಮಂಕಿಪಾಕ್ಸ್​ ಪ್ರಕರಣ ಕೇರಳದಲ್ಲಿಯೇ ಪತ್ತೆಯಾಗಿತ್ತು. ಜುಲೈ 14 ರಂದು ಯುಎಇ ಯಿಂದ ಮರಳಿದ ಪ್ರಯಾಣಿಕರೊಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು ಹಾಗೂ ಅವರನ್ನು ಚಿಕಿತ್ಸೆಗಾಗಿ ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈಗ ಎರಡನೇ ಮಂಕಿಪಾಕ್ಸ್​ ಪ್ರಕರಣ ಪತ್ತೆಯಾಗಿರುವುದರಿಂದ ಜನತೆಯಲ್ಲಿ ನಿಧಾನವಾಗಿ ಭಯ ಆವರಿಸಿಕೊಳ್ಳುತ್ತಿದೆ. ಆದರೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸೋಂಕು ಹರಡದಂತೆ ತಡೆಯಬಹುದು. ಮಂಕಿಪಾಕ್ಸ್ ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ನೀವು ತಿಳಿಯಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.

ಮಂಕಿಪಾಕ್ಸ್ ಎಂದರೇನು?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಂಕಿಪಾಕ್ಸ್ ಒಂದು ವೈರಲ್ ಝೂನೋಸಿಸ್ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್) ಆಗಿದ್ದು, ಈ ಹಿಂದೆ ಸಿಡುಬು ರೋಗಿಗಳಲ್ಲಿ ಕಂಡುಬಂದಿದ್ದ ರೋಗಲಕ್ಷಣಗಳನ್ನು ಹೋಲುತ್ತದೆ. ಆದರೂ ಇದು ವೈದ್ಯಕೀಯವಾಗಿ ಕಡಿಮೆ ತೀವ್ರವಾಗಿರುತ್ತದೆ. 1980 ರಲ್ಲಿ ಸಿಡುಬು ನಿರ್ಮೂಲನೆಗೊಂಡಿದ್ದು ಹಾಗೂ ಅದರ ನಂತರ ಸಿಡುಬು ಲಸಿಕೆಯನ್ನು ನಿಲ್ಲಿಸಿದ ನಂತರ ಮಂಕಿಪಾಕ್ಸ್ ಪ್ರಮುಖವಾದ ಆರ್ಥೋಪಾಕ್ಸ್ ವೈರಸ್ ಆಗಿ ಹೊರಹೊಮ್ಮಿದೆ.

ಮಂಕಿಪಾಕ್ಸ್​ ರೋಗಲಕ್ಷಣಗಳು ಯಾವುವು?ಮಂಕಿಪಾಕ್ಸ್‌ನ ಕೆಲವು ಸಾಮಾನ್ಯ ಲಕ್ಷಣಗಳೆಂದರೆ ಸ್ನಾಯು ನೋವು, ತಲೆನೋವು, ಜ್ವರ, ಕಡಿಮೆ ಶಕ್ತಿ ಮತ್ತು ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು. ಎಐಐಎಂಎಸ್‌ನ ವೈದ್ಯಕೀಯ ವಿಭಾಗದ ಡಾ.ಪಿಯೂಷ್ ರಂಜನ್ ಅವರ ಪ್ರಕಾರ, ಮಂಕಿಪಾಕ್ಸ್ ಲಕ್ಷಣಗಳು ಸಿಡುಬು ಮತ್ತು ಚಿಕನ್‌ಪಾಕ್ಸ್‌ನಂತಿವೆ. ರೋಗಿಗಳಿಗೆ ಜ್ವರ ಮತ್ತು ದುಗ್ಧರಸ ಗ್ರಂಥಿಗಳ ಹಿಗ್ಗುವಿಕೆ ಕಾಣಿಸಿಕೊಳ್ಳುತ್ತದೆ. 1-5 ದಿನಗಳ ನಂತರ ರೋಗಿಯು ಮುಖ, ಅಂಗೈಗಳಲ್ಲಿ ದದ್ದುಗಳು ಕಾಣಿಸಬಹುದು. ಅಲ್ಲದೇ ಕಾರ್ನಿಯಾದಲ್ಲಿ ದದ್ದುಗಳಾಗಿ ಇದು ಕುರುಡುತನಕ್ಕೆ ಕಾರಣವಾಗಬಹುದು. ಗಾಯಗಳಿಗೆ ಕಾರಣವಾಗುವ ದದ್ದುಗಳ ಸಂಖ್ಯೆಯು ಒಂದರಿಂದ ಹಲವಾರು ಸಾವಿರದವರೆಗೆ ಇರುತ್ತದೆ.

ಯಾರಿಗೆಲ್ಲ ಮಂಕಿಪಾಕ್ಸ್​ ಅಪಾಯವಿದೆ?:ಲೈಂಗಿಕ ಸಂಪರ್ಕ ಸೇರಿದಂತೆ ಮಂಕಿಪಾಕ್ಸ್‌ನಿಂದ ಬಳಲುತ್ತಿರುವ ಯಾರೊಂದಿಗಾದರೂ ನಿಕಟ ಸಂಪರ್ಕದಲ್ಲಿರುವ ಜನರು ಹೆಚ್ಚಿನ ಅಪಾಯದಲ್ಲಿರುತ್ತಾರೆ. ರೋಗಕ್ಕೆ ತುತ್ತಾದ ಪ್ರಾಣಿಗಳ ಸಂಪರ್ಕಕ್ಕೆ ಬಂದರೆ ಸೋಂಕು ಹರಡಬಹುದು.

ಮಕ್ಕಳಿಗೂ ಮಂಕಿಪಾಕ್ಸ್​ ಅಪಾಯವಿದೆಯೇ?:ಮಂಕಿಪಾಕ್ಸ್​ ಸೋಂಕಿನ ಹರಡುವಿಕೆ ಕಡಿಮೆಯಾಗಿರುತ್ತದೆ. ಆದರೆ, ಇದು ಮಕ್ಕಳಿಗೆ ಕಾಣಿಸಿಕೊಂಡರೆ ಮಾತ್ರ ಮಾರಣಾಂತಿಕವಾಗಬಹುದು. ಕೋವಿಡ್​-19 ಸೋಂಕು ಬಹು ಬೇಗನೆ ಎಲ್ಲರಿಗೂ ಹರಡುತ್ತದೆ. ಆದರೆ, ಮಂಕಿಪಾಕ್ಸ್​ ಸೋಂಕು ದೀರ್ಘಕಾಲದವರೆಗೆ ಸೋಂಕಿಗೆ ಒಡ್ಡಿಕೊಂಡ ನಂತರ ಸಂಭವಿಸುತ್ತದೆ. ಆದ್ದರಿಂದ ಕೋವಿಡ್​-19ಗೆ ಹೋಲಿಸಿದರೆ ಕೋವಿಡ್​ ಸೋಂಕು ತೀವ್ರ ಸಾಂಕ್ರಾಮಿಕವಾಗಿದೆ ಹಾಗೂ ಮಂಕಿಪಾಕ್ಸ್ ಕಡಿಮೆ ಸಾಂಕ್ರಾಮಿಕವಾಗಿದೆ.

ಮಂಕಿಪಾಕ್ಸ್ ಹೇಗೆ ಹರಡುತ್ತದೆ?:ಮಂಕಿಪಾಕ್ಸ್ ಮಾನವ ಸಂಪರ್ಕದ ಮೂಲಕ ಮತ್ತು ಪ್ರಾಣಿ - ವ್ಯಕ್ತಿಗಳ ಸಂಪರ್ಕದಿಂದ ಹರಡಬಹುದು. ಮಾನವರ ವಿಷಯದಲ್ಲಿ, ಇನ್ನೊಬ್ಬ ಸೋಂಕಿತ ವ್ಯಕ್ತಿಯೊಂದಿಗೆ ಮುಖಾಮುಖಿಯಾಗುವುದು, ಚರ್ಮದಿಂದ ಚರ್ಮ ಸಂಪರ್ಕ, ಬಾಯಿಯಿಂದ ಬಾಯಿ ಅಥವಾ ಬಾಯಿಯಿಂದ ಚರ್ಮ ಸಂಪರ್ಕದಿಂದ ಇದು ಹರಡಬಹುದು. ದಂಶಕಗಳು ಮತ್ತು ಸಸ್ತನಿಗಳಿಂದ ಮಂಕಿಪಾಕ್ಸ್​ ಸೋಂಕು ಹರಡಬಹುದು. ಅಲ್ಲದೆ ಸೋಂಕು ತಗುಲಿ ಸತ್ತ ಪ್ರಾಣಿಯಿಂದಲೂ ಈ ಸೋಂಕು ಕಾಣಿಸಿಕೊಳ್ಳಬಹುದು.

ಮಂಕಿಪಾಕ್ಸ್ ಅಪಾಯ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆಗಳು:

  • ಮಂಕಿಪಾಕ್ಸ್ ಹೊಂದಿರುವ ಶಂಕಿತ ಅಥವಾ ದೃಢಪಟ್ಟಿರುವ ಜನರೊಂದಿಗೆ ನಿಕಟವಾಗಿ ಬೆರೆಯದಿರುವುದು ಹಾಗೂ ಸೋಂಕಿತ ಪ್ರಾಣಿಗಳೊಂದಿಗೆ ಸಂಪರ್ಕಕ್ಕೆ ಬಾರದಿರುವುದು.
  • ಕಲುಷಿತ ಪರಿಸರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುವುದು ಹಾಗೂ ಸೋಂಕುರಹಿತಗೊಳಿಸುವುದು.
  • ಯಾವುದೇ ರೋಗಲಕ್ಷಣಗಳು ಅಥವಾ ದದ್ದುಗಳು ಕಾಣಿಸಿದ ನಂತರ ತಕ್ಷಣ ವೈದ್ಯರನ್ನು ಕಾಣುವುದು.

ಮಂಕಿಪಾಕ್ಸ್​ ರೋಗದ ಕುರಿತಂತೆ ಭಾರತ ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೊಸ ಪ್ರಕರಣಗಳ ಬಗ್ಗೆ ತೀವ್ರ ನಿಗಾ ವಹಿಸುವುದು, ಸೋಂಕು ಹರಡದಂತೆ ಕ್ರಮ ಕೈಗೊಳ್ಳುವುದು, ಅಗತ್ಯವಿಲ್ಲದ ಕಡೆಗೆ ಮನುಷ್ಯರಿಂದ ಮನುಷ್ಯರ ಸಂಪರ್ಕ ಕಡಿಮೆ ಮಾಡಿಸುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳು, ಮನೆಯಲ್ಲಿ ರೋಗಿಯ ಪ್ರತ್ಯೇಕತೆ ಮತ್ತು ಆ್ಯಂಬುಲೆನ್ಸ್ ವರ್ಗಾವಣೆ ಯೋಜನೆ ಮುಂತಾದ ವಿಷಯಗಳ ಬಗ್ಗೆಯೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಸೋಂಕಿತ ವ್ಯಕ್ತಿ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ವಸ್ತುಗಳ ಸಂಪರ್ಕಕ್ಕೆ ಬಂದವರ ಮೇಲೆ 21 ದಿನಗಳವರೆಗೆ ನಿಗಾ ಇಡುವುದನ್ನು ಸಹ ಸೂಚಿಸಲಾಗಿದೆ.

ABOUT THE AUTHOR

...view details