ಭುಜದ ಸಂದುಗಳಲ್ಲಿ ಬಿಗಿತ ಹಾಗೂ ನೋವು ಉಂಟಾಗುವಿಕೆಯನ್ನು ಫ್ರಾಜನ್ ಶೋಲ್ಡರ್ ಅಥವಾ ಭುಜದ ಮರಗಟ್ಟುವಿಕೆ ಎಂದು ಕರೆಯಲಾಗುತ್ತದೆ. ಭುಜದ ಸಂದುಗಳ ಸುತ್ತಲಿನ ಸಂಯೋಜಕ ಅಂಗಾಂಶವು ಊದಿಕೊಳ್ಳುವುದರಿಂದ ಮತ್ತು ಗಟ್ಟಿಯಾಗುವುದರಿಂದ ಈ adhesive capsulitis ಎಂದೂ ಕರೆಯಲಾಗುವ ಭುಜದ ಮರಗಟ್ಟುವಿಕೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಸಂಧಿವಾತದ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೇ ಭುಜದ ಮುಕ್ತ ಚಲನೆಗೆ ಅಡ್ಡಿಯನ್ನುಂಟು ಮಾಡುವ ಅತ್ಯಂತ ಯಾತನಾದಾಯಕವಾದ ಸಮಸ್ಯೆ ಇದಾಗಿದೆ. ನಿತ್ಯದ ಸಹಕ ಕೆಲಸಗಳನ್ನು ನಿರ್ವಹಿಸಲು ಈ ನೋವು ಅಡ್ಡಿಯುಂಟು ಮಾಡುತ್ತದೆ ಹಾಗೂ ದಿನಗಳೆದಂತೆ ಬಿಗಿತ ಹಾಗೂ ನೋವು ಜಾಸ್ತಿಯಾಗುತ್ತದೆ.
ವಾಸ್ತವದಲ್ಲಿ ಏನಿದು ಭುಜದ ಮರಗಟ್ಟುವಿಕೆ ? :ಭುಜಗಳು ಅಸ್ಥಿರಜ್ಜು ಮತ್ತು ಸ್ನಾಯುರಜ್ಜುಗಳಿಂದ ಮಾಡಲ್ಪಟ್ಟಿದ್ದು, ಇವು ಸಂಯೋಜಕ ಅಂಗಾಂಶಗಳ ಪೊರೆಯಿಂದ ಸುತ್ತುವರಿಯಲ್ಪಟ್ಟಿದೆ. ಭುಜದ ಸಂದುಗಳ ಸುತ್ತಲಿನ ಪೊರೆಯು ದಪ್ಪ ಹಾಗೂ ಗಟ್ಟಿಯಾದಾಗ ಇದು ಭುಜದ ಚಲನೆಗೆ ನಿಧಾನವಾಗಿ ತಡೆಯುಂಟು ಮಾಡಲಾರಂಭಿಸುತ್ತದೆ. ಈ ಅನಾರೋಗ್ಯ ಸಮಸ್ಯೆಯು ಸಾಮಾನ್ಯವಾಗಿ ಮೂರು ಹಂತಗಳಲ್ಲಿ ಉಂಟಾಗುತ್ತದೆ.
- ಮರಗಟ್ಟುವಿಕೆಯ ಹಂತ: ಈ ಹಂತವು ಮೂರರಿಂದ ಆರು ತಿಂಗಳ ಅವಧಿಯಲ್ಲಿ ಘಟಿಸುತ್ತದೆ. ಈ ಹಂತದಲ್ಲಿ ನಿಮ್ಮ ಭುಜದ ಮುಕ್ತ ಚಲನೆಗೆ ಅಡ್ಡಿಯುಂಟಾಗುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತದೆ ಹಾಗೂ ಒಂದು ಕಡೆಯ ಚಲನೆಯು ನಷ್ಟವಾಗುತ್ತದೆ.
- ಮರಗಟ್ಟಿದ ಹಂತ: ನಾಲ್ಕರಿಂದ ಹನ್ನೆರಡು ತಿಂಗಳ ಅವಧಿಗೆ ಈ ಹಂತ ಮುಂದುವರೆಯುತ್ತದೆ. ಈ ಅವಧಿಯಲ್ಲಿ ನೋವಿನ ಪ್ರಮಾಣ ಕಡಿಮೆ ಅನಿಸಿದರೂ ಭುಜದ ಚಲನೆಯು ತುಂಬಾ ಕಡಿಮೆಯಾಗುತ್ತದೆ.
- ಉಪಶಮನ ಹಂತ: ಈ ಹಂತದಲ್ಲಿ ಭುಜದ ಮುಕ್ತ ಚಲನೆ ಮತ್ತೆ ಸಾಧ್ಯವಾಗಲಾರಂಭಿಸುತ್ತದೆ. ಭುಜದ ಮರಗಟ್ಟುವಿಕೆ ಆರಂಭವಾದ ಆರು ತಿಂಗಳು ನಂತರ ಅಥವಾ ಕೆಲ ವರ್ಷಗಳ ನಂತರ ನೀವು ಸಂಪೂರ್ಣವಾಗಿ ಮೊದಲಿನಂತೆ ಕೆಲಸ ಮಾಡಲು ಸಾಧ್ಯವಾಗಬಹುದು.
- ಭುಜದ ಮರುಗಟ್ಟುವಿಕೆಯ ಪ್ರತಿಯೊಬ್ಬ ರೋಗಿಯೂ ಭಿನ್ನವಾದ ರೋಗ ಲಕ್ಷಣಗಳನ್ನು ಹೊಂದಿರುತ್ತಾರೆ. ರೋಗದ ಬಗ್ಗೆ ಶೀಘ್ರ ಪತ್ತೆಯಾದಲ್ಲಿ ಬೇಗನೆ ಗುಣಪಡಿಸಬಹುದು.
ಭುಜದ ಮರಗಟ್ಟುವಿಕೆಗೂ ಮಧುಮೇಹಕ್ಕೂ ಸಂಬಂಧವಿದೆಯಾ?
ನಿಮಗೆ ವಯಸ್ಸಾಗಿದ್ದರೆ, ಮಧುಮೇಹ ಇದ್ದರೆ ಎಷ್ಟು ದೀರ್ಘಾವಧಿಯಿಂದ ಇದೆ ಹಾಗೂ ಎಷ್ಟು ತೀವ್ರವಾಗಿದೆ ಎಂಬುದರ ಮೇಲೆ ಭುಜದ ಮರಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳುವುದು ಅವಲಂಬಿತವಾಗಿದೆ. ರಕ್ತದಲ್ಲಿ ಸಕ್ಕರೆಯ ಅನಿಯಂತ್ರಿತ ಪ್ರಮಾಣದಿಂದ ಸಂಯೋಜಕ ಅಂಗಾಂಶಗಳಿಗೆ ಅಗತ್ಯವಾದ ಕೊಲಾಜೆನ್ ಎಂಬ ಪ್ರೋಟೀನ್ ಅಂಶದ ಕೊರತೆಯಾಗಿ ಭುಜದ ಮರಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಕೊಲಾಜೆನ್ ಪ್ರೋಟೀನಿಗೆ ಸಕ್ಕರೆಯ ಅಂಶ ಅಂಟಿಕೊಂಡಾಗ ಅದು ಜಿಗುಟಾಗುತ್ತದೆ ಹಾಗೂ ಇದರಿಂದ ಚಲನೆಗೆ ಅಡ್ಡಿಯುಂಟಾಗುತ್ತದೆ. ಇದರಿಂದಾಗಿ ನಿಮಗೆ ಭುಜದ ಮರಗಟ್ಟುವಿಕೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಮರಗಟ್ಟುವಿಕೆ ಉಂಟಾದಾಗ ಭುಜದ ಚಲನೆಯಿಂದ ನೋವಾಗಬಹುದು ಅಥವಾ ಕೆಲವೊಮ್ಮೆ ಭುಜದ ಚಲನೆ ಸಾಧ್ಯವೇ ಆಗದಿರಬಹುದು.