ನವದೆಹಲಿ: ರಾಷ್ಟ್ರ ರಾಜಧಾನಿಯ ವಾಯು ಮಾಲಿನ್ಯ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎಂಬ ಬಗ್ಗೆ ವರದಿ, ಅಧ್ಯಯನಗಳು ಹೊರಬರುತ್ತಲೇ ಇವೆ. ಇದೀಗ ಈ ಮಾಲಿನ್ಯವು ಮಕ್ಕಳನ್ನು ಹೊಂದುವ ಐವಿಎಫ್ ಚಿಕಿತ್ಸೆಗೂ ಅಡ್ಡಿಯಾಗಿದೆ. ಇದರಿಂದ ದಿನಕ್ಕೊಂದು ಐವಿಎಫ್ ಚಿಕಿತ್ಸೆಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಫರ್ಟಿಲಿಟಿ (ಫಲವತ್ತತೆ) ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ವಾಯು ಮಾಲಿನ್ಯವು ಫಲವತ್ತತೆಯ ಮೆಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತಿಳಿಸಿದ್ದವು. ಇದೀಗ ಆರೋಗ್ಯವಂತ ಮಹಿಳೆಯರು ವಾಯು ಮಾಲಿನ್ಯ ಪರಿಣಾಮಕ್ಕೆ ಒಳಗಾಗುತ್ತಿದ್ದು ಇದೇ ಮೊದಲ ಬಾರಿಗೆ ಐವಿಎಫ್ ಸೆಷನ್ಗಳು ರದ್ದಾಗುತ್ತಿವೆ.
ವಾಯು ಮಾಲಿನ್ಯದಿಂದಾಗಿ ರಾಜಧಾನಿಯಲ್ಲಿ ಅಸ್ತಮಾ ಮತ್ತು ಶ್ವಾಸಕೋಶ ಸಮಸ್ಯೆ, ಕೆಂಪು ಕಣ್ಣು, ಗಂಟಲು ಕೆರೆತಂದಹ ಪ್ರಕರಣಗಳು ವರದಿಯಾಗಿದೆ. ಈ ನಡುವೆ ವಾಯುಗುಣಮಟ್ಟ ಕೂಡ ಕುಸಿಯುತ್ತಲೇ ಇದೆ. ಈ ಎಲ್ಲವೂ ಆರೋಗ್ಯವಂತ ಮಹಿಳೆಯರಲ್ಲಿ ಗರ್ಭದಲ್ಲಿ ಭ್ರೂಣವನ್ನು ಅಳವಡಿಸಲು ತೊಡಕಾಗುತ್ತಿದೆ ಎಂದಿದ್ದಾರೆ.
ಐವಿಎಫ್ ಚಿಕಿತ್ಸೆಯಲ್ಲಿ ಮಹಿಳೆಯರಿಂದ ಪಡೆದ ಅಂಡಾಣುವನ್ನು ಮತ್ತು ಪುರುಷರಿಂದ ಪಡೆದ ವೀರ್ಯಾಣುವನ್ನು ಹೊರಗಿನ ಪರಿಸರದಲ್ಲಿ ಭ್ರೂಣವಾಗುವಂತೆ ಮಾಡಿ. ಆ ಭ್ರೂಣವನ್ನು ಮಹಿಳೆಯರ ಗರ್ಭಾಶಯದಲ್ಲಿ ಅಳವಡಿಸಲಾಗುವುದು. ನಿಗದಿತ ಸಮಯದಲ್ಲಿ ಈ ಭ್ರೂಣಗಳು ಅಳವಡಿಕೆ ಆಗಬೇಕಿದೆ. ಈ ವೇಳೆ ಮಹಿಳೆ ಕೂಡ ಆರೋಗ್ಯವಾಗಿರುವುದು ಅಗತ್ಯ. ಆದರೆ, ವಾಯು ಮಾಲಿನ್ಯದಿಂದ ಮಹಿಳೆಯರಲ್ಲಿ ಕೆಮ್ಮು, ಗಂಟಲು ಸಮಸ್ಯೆ, ಕಣ್ಣು ಕೆಂಪಾಗುವಿಕೆ ಸೆರಿದಂತೆ ಹಲವು ಸಮಸ್ಯೆಗಳು ಕಾಡುತ್ತಿದ್ದು, ಈ ಭ್ರೂಣ ಅಳವಡಿಕೆಯ ಸೆಷನ್ ರದ್ದಾಗುತ್ತಿದೆ ಎಂದಿದ್ದಾರೆ ವೈದ್ಯರು.
ಈ ಕುರಿತು ಮಾತನಾಡಿರುವ ವೈದ್ಯರು, ಇಂದು ಎರಡು ರೋಗಿಗಳಿಗೆ ಈ ಐವಿಎಫ್ ಚಿಕಿತ್ಸೆ ಮುಂದೂಡಲಾಗಿದೆ. ಇದೀಗ ಮತ್ತೊಂದು ಸೈಕಲ್ಗೆ ನಾವು ಕಾಯುವಂತಾಗಿದೆ ಇದರಿಂದ ಮತ್ತೊಂದು ತಿಂಗಳು ಚಿಕಿತ್ಸೆಗೆ ಕಾಯಬೇಕಿದೆ. ಇದು ಆಸ್ಪತ್ರೆ ಮತ್ತು ರೋಗಿಗಳಿಗೆ ಇಬ್ಬರಿಗೂ ಹೊರೆಯಾಗುತ್ತದೆ ಎಂದಿದ್ದಾರೆ. ಈ ಚಿಕಿತ್ಸೆಗೆ ಒಳಗಾಗುವ ಮಹಿಳೆಯರು ಸಾಧ್ಯವಾದಷ್ಟು ಮಾಲಿನ್ಯಕ್ಕೆ ಒಳಗಾಗದಂತೆ, ಆರೋಗ್ಯಯುತ ಆಹಾರ ಸೇವನೆ, ವ್ಯಾಯಾಮ ಅಭ್ಯಾಸ ನಡೆಸುವಂತೆ ಅವರು ಸಲಹೆ ನೀಡಿದ್ದಾರೆ.
ಐವಿಎಫ್ ಚಿಕಿತ್ಸೆ ಹೊರತಾಗಿ ಪುರಷ ಮತ್ತು ಮಹಿಳೆಯರ ಸಂತಾನೋತ್ಪತ್ತಿ ಮೇಲೆ ಈ ವಾಯು ಮಾಲಿನ್ಯ ನಕಾರಾತ್ಮಕ ಪರಿಣಾಮ ಹೊಂದಿದೆ. ಇದರಿಂದ ಹಾರ್ಮೋನ್ ಅಸಮತೋಲನಗೊಂಡು, ಆಕ್ಸಿಡೆವಿಟಿ ಒತ್ತಡ ಮತ್ತು ಊರಿಯೂತದಂತಹ ಸಮಸ್ಯೆಗಳು ವೀರ್ಯಾಣು ಮತ್ತು ಅಂಡಾಣುವಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಗರ್ಭಪಾತ ಅಥವಾ ಗರ್ಭಾವಸ್ಥೆಯ ಅಪಾಯಗಳಾಗುವ ಸಾಧ್ಯತೆ ಇದೆ ಎಂದು ಗುರುಗ್ರಾಮದ ಕ್ಲೌಡ್ನೈನ್ ಗ್ರೂಪ್ ಆಫ್ ಹಾಸ್ಪಿಟಲ್ನ ಹಿರಿಯ ಸಮಾಲೋಚಕರಾದ ಡಾ.ಅಂಜು ಯಾದವ್ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ವಾಯು ಮಾಲಿನ್ಯ: ಈ ಮುನ್ನೆಚ್ಚರಿಕೆ ಕ್ರಮಗಳು ತಿಳಿದಿರಲಿ