ಬೆಂಗಳೂರು: ಯುವ ಜನರಲ್ಲಿ ಪ್ರಾರಂಭಿಕ ಹೃದಯಾಘಾತಕ್ಕೆ ಜೀವನಶೈಲಿಯೇ ಮುಖ್ಯ ಕಾರಣವಾಗಿದೆ. ಆಲಸ್ಯದ ಜೀವನಶೈಲಿ ಧೂಮಪಾನದಷ್ಟೇ ಕೆಟ್ಟದು! ವಾಸ್ತವವಾಗಿ, ವ್ಯಾಯಾಮವು ವಿನೋದಮಯವಾಗಿರಲು ಮತ್ತು ದೇಹದ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಬೇಕು ಸಹಕಾರಿಯಾಗಿದ್ದು, ಔಟಿಂಗ್ ಕೂಡ ಹೃದಯದ ಆರೋಗ್ಯ ಕಾಪಾಡಲಿದೆ. ಉತ್ತಮ ಜೀವನಾಭ್ಯಾಸ ರೂಢಿಸಿಕೊಳ್ಳುವ ಮೂಲಕ ಹೃದಯಾಘಾತದಿಂದ ದೂರ ಇರಬಹುದಾಗಿದೆ.
ವಿಶ್ವ ಹೃದಯ ವರ್ಷಾಚರಣೆ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಕಾವೇರಿ ಆಸ್ಪತ್ರೆ ಹೃದಯತಜ್ಞರು ಮತ್ತು ಹೃದಯನಾಳ ಶಸ್ತ್ರಚಿಕಿತ್ಸಕ ಡಾ. ರಾಜೇಶ್ ಟಿ.ಆರ್ ಹೃದಯದ ಆರೋಗ್ಯ ಕಾಳಜಿ ವಹಿಸುವ ಅಗತ್ಯತೆ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ನಮ್ಮ ಹೃದಯವು ದೇಹದ ಅತ್ಯಂತ ಪ್ರಮುಖ ಭಾಗವಾಗಿದ್ದು, ಅಲ್ಲಿಂದ ದೇಹದ ಇತರ ಭಾಗಗಳಿಗೆ ರಕ್ತವನ್ನು ಪಂಪ್ ಮಾಡುತ್ತದೆ. ಎಲ್ಲ ಸಮಯದಲ್ಲೂ ದೇಹದ ಬೇಕಾದ ಭಾಗಕ್ಕೆ ರಕ್ತದ ಬೇಡಿಕೆಗಳನ್ನು ಹೃದಯವು ಸಮರ್ಪಕವಾಗಿ ಪೂರೈಸುತ್ತದೆ.
ಹೃದಯದ ಕಾಯಿಲೆಗಳಲ್ಲಿ ಸಾಮಾನ್ಯವಾಗಿ ಈ ರಕ್ತ ಪಂಪ್ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ದೇಹದ ಅಗತ್ಯ ರಕ್ತದ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದ ಮಟ್ಟಿಗೆ ಹೃದಯದ ಕೆಲಸ ನಿಂತರೆ, ಅದು ಹೃದಯ ವೈಫಲ್ಯ ಅಥವಾ ಹೃದಯಾಘಾತ ಸ್ಥಿತಿಗೆ ಕಾರಣವಾಗುತ್ತದೆ. ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ ಆಯಾಸಗೊಳ್ಳುತ್ತಾನೆ. ಮತ್ತು ಉಸಿರಾಡಲು ಕಷ್ಟಪಡುತ್ತಿರುತ್ತಾನೆ. ಈ ಸಮಯದಲ್ಲಿ ದೇಹದಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗುವುದರಿಂದ ದೇಹ ಊದಿಕೊಳ್ಳುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ.
ಸೂಕ್ತ ಮುನ್ನೆಚ್ಚರಿಕೆ ವಹಿಸಿ:ಪಾದಗಳು ಊದಿಕೊಳ್ಳಬಹುದು, ಹೊಟ್ಟೆ ಉಬ್ಬಬಹುದು ಮತ್ತು ಎದೆಯಲ್ಲಿ ನೀರು ಶೇಖರಣೆಯಾಗುವುದರಿಂದ ವ್ಯಕ್ತಿಯು ಅಂಗಾತವಾಗಿ ಮಲಗಿದಾಗ ಉಸಿರುಕಟ್ಟಬಹುದು. ಇದು ಉಲ್ಬಣಗೊಳ್ಳಲು ಅವಕಾಶ ನೀಡಿದರೆ ಸರಳವಾದ ದಿನನಿತ್ಯದ ಚಟುವಟಿಕೆಯೂ ತುಂಬಾ ಕಷ್ಟಕರವಾಗುತ್ತದೆ. ವ್ಯಕ್ತಿಯು ತನ್ನ ಹಾಸಿಗೆಯಿಂದ ಏಳಲು ಮತ್ತು ಸ್ನಾನಗೃಹಕ್ಕೆ ಹೋಗಲು ಸಾಧ್ಯವಾಗದಷ್ಟು ಆಯಾಸಗೊಳ್ಳಬಹುದು ಮತ್ತು ಉಸಿರು ಕಟ್ಟಿದ್ದಂತಾಗಬಹುದು ಅಥವಾ ಅವನ ಉಸಿರನ್ನು ಹಿಡಿದಿಟ್ಟುಕೊಳ್ಳಲು ವಿರಾಮವಿಲ್ಲದಂತೆ ಪೂರ್ತಿ ವಾಕ್ಯವನ್ನು ಮಾತನಾಡಬಹುದು! ಇದನ್ನು ಗಮನಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.
ಹೃದ್ರೋಗಗಳು ಹೃದಯವನ್ನು ಹಾನಿಗೊಳಿಸಬಹುದು ಅಥವಾ ದುರ್ಬಲಗೊಳಿಸಬಹುದು ಮತ್ತು ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು. ಹೃದಯ ನಾಳ ಕಾಯಿಲೆ ಇದಕ್ಕೆ ಒಂದು ಸಾಮಾನ್ಯ ಕಾರಣವಾಗಿದ್ದು, ಇದರಲ್ಲಿ ಹೃದಯಕ್ಕೆ ರಕ್ತವನ್ನು ಪೂರೈಸುವ ಅಪಧಮನಿಗಳಲ್ಲಿ ಬ್ಲಾಕ್ ಕಾಣಿಸುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು ಮತ್ತು ಹೃದಯ ಸ್ನಾಯುವನ್ನು ಹಾನಿಗೊಳಿಸಬಹುದು. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಪರಿಸ್ಥಿತಿಗಳು ನೇರವಾಗಿ ಹೃದಯ ಸ್ನಾಯುವಿನ ಮೇಲೆ ಪರಿಣಾಮ ಬೀರಬಹುದು ಅಥವಾ ಹೃದಯ ನಾಳ ಕಾಯಿಲೆಗೆ ಕಾರಣವಾಗಬಹುದು ಮತ್ತು ಹೃದಯ ವೈಫಲ್ಯವನ್ನೂ ಉಂಟು ಮಾಡಬಹುದು.
ಯಾವುದನ್ನೂ ಹಗುರವಾಗಿ ಪರಿಗಣಿಸಬಾರದು:ಹೃದಯ ಕವಾಟಗಳಲ್ಲಿನ ಸಮಸ್ಯೆ, ಕಾಲಾವಧಿಯಲ್ಲಿ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು. ಕಾರ್ಡಿಯೊಮಿಯೊಪತಿ ಎನ್ನುವುದು ಹೃದಯ ಸ್ನಾಯು ದುರ್ಬಲಗೊಳ್ಳುವ ಸ್ಥಿತಿಯಾಗಿದೆ. ಇದು ತಕ್ಷಣ ಸಂಭವಿಸುವಂತಹದ್ದಾಗಿರಬಹುದು ಅಥವಾ ಆಲ್ಕೋಹಾಲ್, ವೈರಲ್ ಮಯೋಕಾರ್ಡಿಟಿಸ್‌ನಂತಹ ಸೋಂಕುಗಳು, ಕ್ಯಾನ್ಸರ್-ಚಿಕಿತ್ಸೆಯ ಔಷಧಿಗಳು, ಕೊಕೇನ್‌ನಂತಹ ಔಷಧಗಳು ಇತ್ಯಾದಿಯಿಂದ ಉಂಟಾಗಬಹುದು.
ಕೆಲವೊಮ್ಮೆ ತೀವ್ರವಾದ ಭಾವನಾತ್ಮಕ ಅಥವಾ ದೈಹಿಕ ಒತ್ತಡದಿಂದಾಗಿಯೂ ಹೃದಯ ಸ್ನಾಯು ದುರ್ಬಲಗೊಳ್ಳುತ್ತದೆ, ಹಿಗ್ಗುತ್ತದೆ ಮತ್ತು ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ. ಇದನ್ನು "ಬ್ರೋಕನ್ ಹಾರ್ಟ್ ಸಿಂಡ್ರೋಮ್" ಅಥವಾ ಟಕೋಟ್ಸುಬೊ ಕಾರ್ಡಿಯೊಮಿಯೋಪತಿ ಎಂದು ಕರೆಯಲಾಗುತ್ತದೆ. ಜನ್ಮಜಾತ ಹೃದಯ ಕಾಯಿಲೆಯಲ್ಲಿ, ಹೃದಯವು ಸರಿಯಾಗಿ ರೂಪುಗೊಳ್ಳುವುದಿಲ್ಲ. ಇಂತಹ ಸ್ಥಿತಿ ಕೆಲವರಿಗೆ ಹುಟ್ಟಿನಿಂದಲೇ ಬರುತ್ತದೆ. ಇದು ಕೂಡ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು ಇದನ್ನು ಯಾರೂ ಲಘುವಾಗಿ ಪರಿಗಣಿಸಬಾರದು ಎಂದು ಸಲಹೆ ನೀಡಿದ್ದಾರೆ.