ನವದೆಹಲಿ: ಪ್ರಸ್ತುತ ಪ್ರಬಲವಾಗಿರುವ ಮತ್ತು ಹೆಚ್ಚು ಹರಡಬಲ್ಲ ಕೋವಿಡ್ -19 ಉಪ ರೂಪಾಂತರವಾದ ಜೆಎನ್ 1 ಹಿಂದಿನ ರೂಪಾಂತರಕ್ಕಿಂತ ದೊಡ್ಡ ಅಲೆಗೆ ಕಾರಣವಾಗಬಹುದು ಎಂದು ಜಾಗತಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೆಎನ್ .1 ರೂಪಾಂತರವು ವೇಗವಾಗಿ ಹರಡುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಇದನ್ನು ಪ್ರಮುಖ ರೂಪಾಂತರ (ವಿಒಐ) ಎಂದು ವರ್ಗೀಕರಿಸಿದೆ. ಪ್ರಸ್ತುತ ಭಾರತ ಸೇರಿದಂತೆ 41 ಕ್ಕೂ ಹೆಚ್ಚು ದೇಶಗಳಲ್ಲಿ ಈ ರೂಪಾಂತರ ಕಂಡು ಬಂದಿದೆ.
ಜೆಎನ್.1 ಮೊಟ್ಟ ಮೊದಲು ಆಗಸ್ಟ್ನಲ್ಲಿ ಲಕ್ಸೆಂಬರ್ಗ್ನಲ್ಲಿ ಪತ್ತೆಯಾಗಿತ್ತು. ಜೆಎನ್.1 ಅದರ ಮೂಲ ಬಿಎ.2.86 ಗೆ ಹೋಲುತ್ತದೆ. ಆದರೆ, ಸ್ಪೈಕ್ ಪ್ರೋಟೀನ್ನಲ್ಲಿ ಹೆಚ್ಚುವರಿ ರೂಪಾಂತರವನ್ನು (ಎಲ್ 455 ಎಸ್) ಹೊಂದಿದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆ ತಪ್ಪಿಸುವ ಗುಣಲಕ್ಷಣಗಳನ್ನು ಹೊಂದಿದೆ.
"ಈ ಜೆಎನ್ .1 ಅಲೆ ಇನ್ನೂ ಉತ್ತುಂಗಕ್ಕೇರಿಲ್ಲ ಮತ್ತು ಮುಂದಿನ ವಾರ ಅಥವಾ ಜನವರಿ ಮಧ್ಯದಲ್ಲಿ ಉತ್ತುಂಗಕ್ಕೇರುವ ಸಾಧ್ಯತೆಯಿದೆ" ಎಂದು ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ನ ಪ್ರೊಫೆಸರ್ ಕ್ರಿಸ್ಟಿನಾ ಪೇಗೆಲ್ ಈ ಹಿಂದೆ ಐ ನ್ಯೂಸ್ಗೆ ತಿಳಿಸಿದರು. "ಈ ಅಲೆಯು 2022 ರಲ್ಲಿ ಕಂಡು ಬಂದ ಮೊದಲ ಎರಡು ಒಮಿಕ್ರಾನ್ ಅಲೆಗಳನ್ನು ಮೀರಿಸಬಹುದು ಎಂದು ಖಾತ್ರಿಯಿದೆ." ಎಂದು ಅವರು ಹೇಳಿದರು.
"ತ್ಯಾಜ್ಯನೀರಿನಲ್ಲಿ ಜೆಎನ್ .1 ಮಟ್ಟವು ಈಗ ಒಮಿಕ್ರಾನ್ ನಂತರ ಸಾಂಕ್ರಾಮಿಕ ರೋಗದಲ್ಲಿ ಯುಎಸ್ನಲ್ಲಿ ಎರಡನೇ ಅತಿದೊಡ್ಡ ಸೋಂಕಿನ ಅಲೆಯಾಗಿದೆ. ಹೆಚ್ಚಿನ ಜನ ಮನೆಯಲ್ಲಿ ಪರೀಕ್ಷಿಸುವುದರಿಂದ ಅಥವಾ ಪರೀಕ್ಷಿಸದ ಕಾರಣ ನಾವು ನಿಜವಾದ ಸೋಂಕುಗಳ ಸಂಖ್ಯೆ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಆದರೆ ವೈರಸ್ ಹೊಂದಿರುವ ತ್ಯಾಜ್ಯನೀರಿನ ಪರೀಕ್ಷೆಯು ನಿತ್ಯ ಸುಮಾರು 2 ಮಿಲಿಯನ್ ಅಮೆರಿಕನ್ನರು ಇದರ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಸೂಚಿಸುತ್ತದೆ" ಎಂದು ಸ್ಕ್ರಿಪ್ಸ್ ರಿಸರ್ಚ್ನ ಆಣ್ವಿಕ ಔಷಧದ ಪ್ರಾಧ್ಯಾಪಕ ಎರಿಕ್ ಜೆ ಟೋಪೋಲ್ ಲಾಸ್ ಏಂಜಲೀಸ್ ಟೈಮ್ಸ್ನಲ್ಲಿ ಬರೆದಿದ್ದಾರೆ.
"ಯುರೋಪಿನ ಹಲವಾರು ದೇಶಗಳಲ್ಲಿ ತ್ಯಾಜ್ಯನೀರಿನ ಮಟ್ಟದಲ್ಲಿ ವೈರಸ್ನ ಮಟ್ಟವು ಅಭೂತಪೂರ್ವ ಮಟ್ಟವನ್ನು ತಲುಪಿದೆ ಹಾಗೂ ಇದು ಒಮಿಕ್ರಾನ್ ಅನ್ನು ಮೀರಿದೆ" ಎಂದು ಅವರು ಹೇಳಿದರು.
ಮುಂಬರುವ ವಾರಗಳಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಏರಿಕೆಯಾಗಬಹುದು. ಈ ಅಲೆಯು ನಾವು ಈ ಹಿಂದೆ ನೋಡಿದ ಎಲ್ಲಕ್ಕಿಂತ ದೊಡ್ಡದಾಗಿರಬಹುದು" ಎಂದು ಲಂಡನ್ನ ಇಂಪೀರಿಯಲ್ ಕಾಲೇಜಿನ ವೈರಸ್ ತಜ್ಞ ಪ್ರೊಫೆಸರ್ ಪೀಟರ್ ಓಪನ್ಶಾ ಹೇಳಿದ್ದಾರೆ. ಸೋಂಕಿನ ಹರಡುವಿಕೆ ತಡೆಯಲು ತಜ್ಞರು ಕೋವಿಡ್ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಜನರಿಗೆ ಸಲಹೆ ನೀಡಿದ್ದಾರೆ. (IANS)
ಇದನ್ನೂ :ಷೇರು ಮಾರುಕಟ್ಟೆಯಲ್ಲಿ ಅಲ್ಪ ಏರಿಕೆ - ನಿಫ್ಟಿ 28 ಅಂಕ ಹೆಚ್ಚಳ