ಲಂಡನ್:ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡಲು ಬಯಸುವಿರಾ?. ಹಾಗಾದ್ರೆ ನೀವು ದಿನಕ್ಕೆ ಸರಿಸುಮಾರು 6.4 ಕಿಮೀ ಸಮಾನವಾದ 8,000 ಹೆಜ್ಜೆಗಳನ್ನು ನಡೆಯಲೇಬೇಕು. ಇಷ್ಟು ಹೆಜ್ಜೆಗಳನ್ನು ನೀವು ಪ್ರತಿದಿನ ನಡೆದಿದ್ದೇ ಆದಲ್ಲಿ ಖಂಡಿತಾ ನೀವು ಈ ಅಪಾಯದಿಂದ ಪಾರಾಗಲಿದ್ದೀರಿ ಎಂಬುದಕ್ಕೆ ಮೊದಲ ವೈಜ್ಞಾನಿಕ ಪುರಾವೆಯನ್ನು ಹೊಸ ಅಧ್ಯಯನವೊಂದು ಸಾಬೀತುಪಡಿಸಿದೆ.
ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು, ಹೆಚ್ಚಿನ ಜನರು ಪ್ರಯೋಜನಗಳನ್ನು ಪಡೆಯುವ ಅತ್ಯುತ್ತಮ ನಡಿಗೆಯ ಸಂಖ್ಯೆಯನ್ನು ಮೊದಲ ಬಾರಿಗೆ ಗುರುತಿಸಿದೆ ಮತ್ತು ನೀವು ನಡೆಯುವ ವೇಗವು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ.
"ಸಾಂಪ್ರದಾಯಿಕವಾಗಿ, ಆರೋಗ್ಯ ಪ್ರಯೋಜನಗಳನ್ನು ಪಡೆಯಲು ದಿನಕ್ಕೆ ಸುಮಾರು 10,000 ಹೆಜ್ಜೆಗಳನ್ನು ನಡೆಯಬೇಕು ಎಂದು ಅನೇಕ ಜನರು ಭಾವಿಸಿದ್ದರು. ಇದು 1960 ರ ದಶಕದಲ್ಲಿ ಜಪಾನ್‌ನಿಂದ ಹೊರಬಂದ ಕಲ್ಪನೆಯಾಗಿದೆ. ಆದರೆ ವಿಜ್ಞಾನದಲ್ಲಿ ಇದಕ್ಕೆ ಯಾವುದೇ ಆಧಾರವಿಲ್ಲ" ಎಂದು ಸ್ಪೇನ್‌ನ ಗ್ರಾನಡಾ ವಿಶ್ವವಿದ್ಯಾಲಯದ (UGR) ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಲೇಖಕ ಫ್ರಾನ್ಸಿಸ್ಕೊ ಬಿ ಒರ್ಟೆಗಾ ತಿಳಿಸಿದ್ದಾರೆ.
"ನೀವು ಹೆಚ್ಚು ಹೆಜ್ಜೆಗಳನ್ನು ನಡೆದರೆ ಉತ್ತಮ ಎಂದು ನಾವು ಮೊದಲ ಬಾರಿಗೆ ತೋರಿಸಿದ್ದೇವೆ ಮತ್ತು ಅಲ್ಲದೆ ಈ ರೀತಿ ನೀವು ದೂರ ನಡೆದರೆ ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತಾಗಿರುವ ಯಾವುದೇ ನಿದರ್ಶನವಿಲ್ಲ ಎಂಬುದನ್ನು ನಾವು ತೋರಿಸಿದ್ದೇವೆ" ಎಂದು ಒರ್ಟೆಗಾ ಹೇಳಿದರು. ಅಲ್ಲದೇ ಸಾಕಷ್ಟು ಜನರು ದಿನಕ್ಕೆ 9,000 ಹೆಜ್ಜೆಗಳನ್ನು ತಮ್ಮ ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸಂಶೋಧಕರು 1,10,000ಕ್ಕೂ ಹೆಚ್ಚು ಜನರನ್ನು ಒಳಗೊಂಡ ಹನ್ನೆರಡು ಅಂತರರಾಷ್ಟ್ರೀಯ ಅಧ್ಯಯನಗಳಿಂದ ವ್ಯವಸ್ಥಿತ ಸಾಹಿತ್ಯ ವಿಮರ್ಶೆ ಮತ್ತು ಡೇಟಾದ ಮೆಟಾ-ವಿಶ್ಲೇಷಣೆ ನಡೆಸಿದರು. ಈ ಅಧ್ಯಯನದ ಫಲಿತಾಂಶಗಳು ಇತರ ಇತ್ತೀಚಿನ ಅಧ್ಯಯನಗಳಿಗೆ ಅನುಗುಣವಾಗಿವೆ. ಇದು ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಕನಿಷ್ಟ 10,000 ಕ್ಕಿಂತ ಕಡಿಮೆ ಹೆಜ್ಜೆಯ ನಡಿಗೆಯನ್ನು ತೋರಿಸುತ್ತದೆ.
"ಈ ಅಧ್ಯಯನದಿಂದ ದಿನದ ನಡಿಗೆಯಲ್ಲಿ ಸ್ವಲ್ಪ ಹೆಚ್ಚಳದಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಕಡಿಮೆ ಮಟ್ಟದ ದೈಹಿಕ ಚಟುವಟಿಕೆ ಹೊಂದಿರುವ ಜನರಿಗೆ ಪ್ರತಿ ಹೆಚ್ಚುವರಿ 500 ಹೆಜ್ಜೆಯ ನಡಿಗೆ ಅವರ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ನಾವು ತೋರಿಸುತ್ತೇವೆ" ಎಂದು ಪೋಸ್ಟ್‌ಡಾಕ್ಟರಲ್ ರಿಸರ್ಚ್ ಫೆಲೋ ಎಸ್ಮಿ ಬಕ್ಕರ್ ಹೇಳಿದರು.
"ಇದು ಒಳ್ಳೆಯ ಸುದ್ದಿ. ಏಕೆಂದರೆ ಪ್ರತಿಯೊಬ್ಬರೂ ದಿನಕ್ಕೆ ಸುಮಾರು 9,000 ಹೆಜ್ಜೆಗಳನ್ನು ನಡೆಯಲು ಸಾಧ್ಯವಿಲ್ಲ. ಕನಿಷ್ಠ ಮೊದಲಿಗೆ ಅಲ್ಲದಿದ್ದರೂ ನೀವು ಸಣ್ಣ ಹಾಗೂ ತಲುಪಬಹುದಾದ ಗುರಿಗಳನ್ನು ಹೊಂದಬಹುದು ಮತ್ತು ಕ್ರಮೇಣ ಪ್ರಗತಿ ಸಾಧಿಸಬಹುದು ಮತ್ತು ದಿನದಿನಕ್ಕೆ ನಡಿಗೆಯ ಸಂಖ್ಯೆಯನ್ನು ಹೆಚ್ಚಿಸಬಹುದು" ಎಂದು ಸಂಶೋಧಕರು ಹೇಳಿದ್ದಾರೆ. ಅಧ್ಯಯನವು ಪುರುಷರು ಮತ್ತು ಮಹಿಳೆಯರ ನಡುವೆ ಯಾವುದೇ ವ್ಯತ್ಯಾಸವನ್ನು ಬಹಿರಂಗಪಡಿಸಿಲ್ಲ. ಆದರೆ ವೇಗವಾದ ನಡಿಗೆಯು ಮರಣದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅದು ಕಂಡುಹಿಡಿದಿದೆ.