ವಾಷಿಂಗ್ಟನ್: ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ಜನಪ್ರಿಯವಾಗುತ್ತಿದ್ದು, ಮಕ್ಕಳು ಮತ್ತು ಯುವಜನತೆ ಶೇ 71ರಷ್ಟು ಗಾಯಗಳಿಗೆ ಒಳಗಾಗುವ ಸಾಧ್ಯತೆ ಇದೆ. ಹೆಲ್ಮೆಟ್ ಧರಿಸುವುದರಿಂದ ತಲೆಗೆ ಆಗುವ ಗಾಯಗಳನ್ನು ತಪ್ಪಿಸಬಹುದು ಎಂದು ಭಾರತೀಯ ಮೂಲದ ವಿಜ್ಞಾನಿಗಳು ನಡೆಸಿದ ಸಂಶೋಧನೆಗಳು ತಿಳಿಸಿವೆ.
ಎರಡು ವರ್ಷ ನಡೆಸಿದ ಈ ಅಧ್ಯಯನದಲ್ಲಿ ಅಮೆರಿಕದ ತುರ್ತು ಚಿಕಿತ್ಸಾ ವಿಭಾಗದಲ್ಲಿ ಇ ಸ್ಕೂಟರ್ನಿಂದ 13,557 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ.
ಇನ್ನು, 2021ರಲ್ಲಿ 8,545 ಮಂದಿ ಗಾಯದ ಸಮಸ್ಯೆಗೆ ಒಳಗಾದರೆ 2020ರಲ್ಲಿ ಶೇ 5,012 ಮಂದಿ ಗಾಯಗೊಂಡಿದ್ದಾರೆ. ಒಂದೇ ವರ್ಷಕ್ಕೆ ಗಾಯಗೊಂಡವರ ಸಂಖ್ಯೆ ಶೇ 71ರಷ್ಟು ಅಧಿಕವಾಗಿದೆ ಎಂದು ವರದಿಯಾಗಿದೆ. ಇನ್ನು ಅಪಘಾತದಲ್ಲಿ ಸಾಮಾನ್ಯವಾಗಿ ಮೂಳೆ ಮುರಿತ ಮತ್ತು ತಲೆಗೆ ಹೆಚ್ಚು ಪೆಟ್ಟಾದ ವರದಿ ಆಗಿದೆ.
ಹೆಚ್ಚು ಮಕ್ಕಳು ಮತ್ತು ಯುವ ಜನತೆ ಇ ಸ್ಕೂಟರ್ ಬಳಕೆ ಮಾಡುವುದರಿಂದ ಸುರಕ್ಷತೆ ನಿಯಮವನ್ನು ಪಾಲಿಸುವುದು ಅಗತ್ಯ. ಸವಾರರು ಹೆಲ್ಮೆಟ್ ಬಳಕೆ ಮಾಡುವುದರಿಂದ ತಲೆಗೆ ಆಗುವ ಗಾಯಗಳಿಂದ ಪಾರಾಗಬಹುದು. ಸರಿಯಾದ ಮೂಲಸೌಕರ್ಯ ಅಭಿವೃದ್ಧಿ, ಸ್ಕೂಟರ್ ಲೇನ್ಗಳನ್ನು ಮಾಡುವುದು ಕೂಡ ಮುಖ್ಯವಾಗಿದೆ ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪೆರೆಲ್‌ಮನ್ ಸ್ಕೂಲ್ ಆಫ್ ಮೆಡಿಸಿನ್‌ನ ವೈದ್ಯಕೀಯ ವಿದ್ಯಾರ್ಥಿನಿ ರಾಧಿಕಾ ಗುಪ್ತಾ ತಿಳಿಸಿದ್ದಾರೆ.