ಬೆಂಗಳೂರು: ಶೇ 40ರಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ಕಾರಣ ತಂಬಾಕು, ಆಲ್ಕೋಹಾಲ್ ಮತ್ತು ಪಾನ್ ಮಸಾಲಾ ಆಗಿದ್ದು, ಶೇ 4ರಷ್ಟು ಪ್ರಕರಣಗಳು ಅನುವಂಶಿಕವಾದರೆ, ಶೇ 10ರಷ್ಟು ಕ್ಯಾನ್ಸರ್ ಪ್ರಕರಣಗಳು ಶುಚಿತ್ವಕ್ಕೆ ಸಂಬಂಧಿಸಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಇದೇ ವೇಳೆ, ಶೇ 20ರಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ಸುಳಿವು ಇಲ್ಲ ಎಂದಿದೆ.
ಈ ಕುರಿತು ಮಾತನಾಡಿರುವ ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್ನ ಉಪ ನಿರ್ದೇಶಕರು ಮತ್ತು ಕ್ಯಾನ್ಸರ್ ಸರ್ಜನ್ ಮುಖ್ಯಸ್ಥರು ಆಗಿರುವ ಪ್ರೊ ಪಂಕಜ್ ಚತುರ್ವೇದಿ, ರಕ್ತ ಮತ್ತು ಮೂಳೆ ಕ್ಯಾನ್ಸರ್ಗೆ ಏನು ಕಾರಣ ಎಂಬುದರ ಸುಳಿವಿಲ್ಲ. ಇದರ ಕಾರಣ ಪತ್ತೆ ಮಾಡುವುದು ಅತ್ಯಗತ್ಯವಾಗಿದೆ. ಸಮಾಜದಲ್ಲಿ ಕ್ಯಾನ್ಸರ್ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ ಎಂದಿದ್ದಾರೆ.
ಲಕ್ನೋದ ಲೋಕಭವನದಲ್ಲಿ ನಡೆದ ವಿಕ್ಟರಿ ಓವರ್ ಕ್ಯಾನ್ಸರ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ವಾರಾಣಸಿಯಲ್ಲಿ 25 ಸಾವಿರ ಕ್ಯಾನ್ಸರ್ ಪ್ರಕರಣ ದಾಖಲಾಗುತ್ತಿದೆ. ಈವರೆಗೆ 70 ಸಾವಿರ ಕ್ಯಾನ್ಸರ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದೆ. ಮುಂಬೈನ ಕ್ಯಾನ್ಸರ್ ಆಸ್ಪತ್ರೆಗಳಿಗೆ ಕ್ಯಾನ್ಸರ್ ರೋಗಿಗಳು ದಾಖಲಾಗುವುದರಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ ಎಂದರು.
ನಗರ ಪ್ರದೇಶದಲ್ಲಿನ ಮಹಿಳಾ ರೋಗಿಗಳಲ್ಲಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಗರ್ಭಕಂಠದ ಕ್ಯಾನ್ಸರ್ ನಗರಗಳಿಗಿಂತ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಹೆಚ್ಚಾಗಿ ಕಾಣುತ್ತಿದೆ. ಉತ್ತರ ಪ್ರದೇಶದ ಗಂಗಾ ನದಿ ತೀರದಲ್ಲಿ ವಾಸಿಸುವ ಜನರಲ್ಲಿ ವಿಶೇಷವಾದ ಪಿತ್ತಕೋಶದ ಕ್ಯಾನ್ಸರ್ ಕಂಡು ಬರುತ್ತದೆ. ಭಾರತದ ಹೊರತಾಗಿ ಚಿಲಿಯಲ್ಲಿ ಈ ಪಿತ್ತಕೋಶದ ಕ್ಯಾನ್ಸರ್ ಸಾಮಾನ್ಯವಾಗಿ ಕಂಡುಬರುತ್ತದೆ.