ನವದೆಹಲಿ: ಭಾರತದಲ್ಲಿ ಸರಿಸುಮಾರು 315 ಮಿಲಿಯನ್ ಮಂದಿ ಅಧಿಕ ರಕ್ತದೊತ್ತಡದಿಂದ (High BP) ಬಳಲುತ್ತಿದ್ದರೆ, 101 ಮಿಲಿಯನ್ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ (ICMR) ಎಚ್ಚರಿಸಿದೆ. ಈ ಕುರಿತ ವರದಿಯನ್ನು ಲ್ಯಾನ್ಸೆಟ್ ಡಯಾಬಿಟೀಸ್ ಆ್ಯಂಡ್ ಎಂಡೊಕ್ರಿನೊಲಾಜಿಯಲ್ಲಿ ಪ್ರಕಟಿಸಲಾಗಿದೆ.
136 ಮಿಲಿಯನ್ ಭಾರತೀಯರು ಪೂರ್ವ ಮಧುಮೇಹ ಹೊಂದಿದ್ದಾರೆ. 213 ಮಿಲಿಯನ್ ಜನರು ಅಧಿಕ ಕೊಲೆಸ್ಟ್ರಾಲ್ ಹಾಗು 185 ಮಿಲಿಯನ್ ಮಂದಿ ಹೆಚ್ಚಿನ ಎಲ್ಡಿಎಲ್ ಕೊಲೆಸ್ಟ್ರಾಲ್ ಅಥವಾ ಕೊಲೆಸ್ಟ್ರಾಲ್ನಿಂದ ಬಳಲುತ್ತಿದ್ದಾರೆ. ಇದರ ಜೊತೆಗೆ, 254 ಮಿಲಿಯನ್ ಜನರು ಸ್ಥೂಲಕಾಯದಿಂದಲೂ 351 ಮಿಲಿಯನ್ ಜನರು ಹೊಟ್ಟೆಯ ಸ್ಥೂಲಕಾಯ ಹೊಂದಿದ್ದಾರೆ ಎಂದು ವರದಿ ಹೇಳಿದೆ.
12 ವರ್ಷಗಳ ಸುದೀರ್ಘ ಅಧ್ಯಯನ: ಐಸಿಎಂಆರ್- ಇಂಡಿಯಾ ಡಯಾಬಿಟೀಸ್ ಅಧ್ಯಯನದಲ್ಲಿ 1,13,043 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. 33,537 ನಗರ ಮತ್ತು 79,506 ಗ್ರಾಮೀಣ ಜನರು ಇದರಲ್ಲಿ ಭಾಗಿಯಾಗಿದ್ದರು. 20 ವರ್ಷದ ವಯೋಮಾನ ಮತ್ತು ಅದರಿಂದ ಮೇಲ್ಪಟವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 31 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 2008 ಮತ್ತು 2020ರಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು.
ಸಾಂಕ್ರಾಮಿಕವಲ್ಲದ ರೋಗದ ದರ ಕೂಡ ದೇಶದಲ್ಲಿ ಹಲವು ಪ್ರದೇಶಗಳಲ್ಲಿ ಹೆಚ್ಚುತ್ತಿದೆ. ಭಾರತೀಯರ ಚಯಾಪಚಯ ಎನ್‌ಸಿಡಿಗಳ ಹರಡುವಿಕೆಯನ್ನು ಪ್ರಮಾಣೀಕರಿಸಲು ಮತ್ತು ಅಂತಾರಾಜ್ಯ ಮತ್ತು ಅಂತರ- ಪ್ರಾದೇಶಿಕ ವ್ಯತ್ಯಾಸಗಳನ್ನು ವಿಶ್ಲೇಷಿಸುವ ಗುರಿ ಹೊಂದಿದ್ದೇವೆ ಎಂದು ಐಸಿಎಂಆರ್ನ ಸಂಶೋಧಕ ರಂಜೀತ್ ಮೋಹನ್ ಅಂಜನಾ ವಿವರ ನೀಡಿದರು.