ನವದೆಹಲಿ: ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದ 2 ವರ್ಷದ ಪುಟ್ಟ ಕಂದಮ್ಮನಿಗೆ ಬರ್ಲಿನ್ ಹೃದಯ (ಕೃತಕ ಹೃದಯ) ಕಸಿ ಚಿಕಿತ್ಸೆ ನೀಡುವಲ್ಲಿ ಭಾರತೀಯ ವೈದ್ಯರು ಯಶಸ್ವಿಯಾಗಿದ್ದಾರೆ. ಇದು ದೇಶದಲ್ಲಿ ನಡೆದ ಮೊದಲ ಯಶಸ್ವಿ ಕೃತಕ ಹೃದಯ ಕಸಿ ಚಿಕಿತ್ಸೆಯಾಗಿದೆ.
ಯುಎಇ ದೇಶದ ಮಗು ಕಾರ್ಡಿಯೋಮಿಯೋಪತಿಯಿಂದ ಹೃದಯ ವೈಫಲ್ಯದ ಕೊನೆಯ ಹಂತದಲ್ಲಿ ಹೋರಾಡುತ್ತಿತ್ತು. ಕಾರ್ಡಿಯೋಮಿಯೋಪತಿ ಸ್ಥಿತಿಯಲ್ಲಿ ಹೃದಯದ ಸ್ನಾಯುವು ದೇಹದ ಇತರೆ ಭಾಗಕ್ಕೆ ಹೃದಯದ ರಕ್ತ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ. ಇದು ಹೃದಯ ವೈಫಲ್ಯಕ್ಕೂ ಕಾರಣವಾಗುತ್ತದೆ.
ಮಾರ್ಚ್ನಲ್ಲಿ ನವದೆಹಲಿಯ ಇಂದ್ರಪ್ರಸ್ಥ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಲಾಗಿತ್ತು. ಮಗುವಿನ ಹೃದಯ ಕಸಿಗಾಗಿ ರಾಷ್ಟ್ರೀಯ ಅಂಗಾಂಗ ಮತ್ತು ಟಿಶ್ಯೂ ಕಸಿ ಸಂಘಟನೆಯಲ್ಲಿ (ಎನ್ಒಟಿಟಿಒ) ಕೂಡ ನೋಂದಣಿ ಮಾಡಿಸಲಾಗಿತ್ತು. ಕಸಿ ಶಸ್ತ್ರಚಿಕಿತ್ಸೆಗಾಗಿ ದಾನಿಗಳಿಂದ ಸೂಕ್ತ ಹೃದಯಕ್ಕಾಗಿ ವೈದ್ಯರು ಕಾದಿದ್ದರು. ಆದರೆ, ಈ ನಡುವೆ ಮಗುವಿನ ಆರೋಗ್ಯ ಸ್ಥಿತಿ ಬಿಗಡಾಯಿಸಿತು. ಈ ನಡುವೆ ಮಗು ಇಂಟ್ರಕ್ಟಬಲ್ ಕಾರ್ಡಿಯೋಜೆನಿಕ್ ಆಘಾತಕ್ಕೂ ಒಳಗಾಯಿತು. ಇದರಿಂದ ಹೃದಯವು ರಕ್ತಕ್ಕೆ ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಪಂಪ್ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿತ್ತು.
ಮಗುವಿನ ಜೀವ ಉಳಿಸಲು ವೈದ್ಯರು ಬರ್ಲಿನ್ ಹಾರ್ಟ್ (ಕೃತಕ ಹೃದಯ) ಎಂಬ ವಿಶೇಷ ಸಾಧನವನ್ನು ಜುಲೈ 29ರಂದು ಕಸಿ ಶಸ್ತ್ರ ಚಿಕಿತ್ಸೆ ಮೂಲಕ ಅಳವಡಿಸಿದ್ದಾರೆ. ಇದಾದ ಬಳಿಕ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡಿತು.