ಸಾಮಾಜಿಕ ಮಾಧ್ಯಮಗಳು ಯಾವ ಮಟ್ಟಿಗೆ ನಮ್ಮನ್ನು ಆವರಿಸಿಕೊಂಡಿವೆ ಎಂದರೆ ಒಂದೊತ್ತಿನ ಊಟ ಮರೆತರೂ ಇವುಗಳಲ್ಲಿ ಮುಳುಗುವುದನ್ನು ಮರೆಯುವುದಿಲ್ಲ. ನಿಮಿಷಕ್ಕೊಮ್ಮೆಯಾದರೂ ಹಲವು ಆ್ಯಪ್ಗಳ ಮೇಲೆ ಕಣ್ಣಾಡಿಸುವುದಿದೆ. ಇದೇ ಕಾರಣಕ್ಕೆ ಸ್ಮಾರ್ಟ್ಫೋನ್ಗಳು ಬದುಕಿನ ಅಗತ್ಯವಸ್ತು ಎನ್ನುವುದಕ್ಕಿಂತಲೂ ಹೆಚ್ಚಾಗಿ ಜೀವನದ ಭಾಗವೇ ಆಗಿ ಹೋಗಿದೆ. ಆಧುನಿಕ ಕಾಲಘಟ್ಟದಲ್ಲಿ ವ್ಯಕ್ತಿಯ ಅತ್ಯಾಪ್ತ ಸ್ನೇಹಿಯಾಗಿರುವ ಈ ಆ್ಯಪ್ಗಳಿಂದ ಜನರು ಒಂಟಿ ಎಂದು ಭಾವಿಸುವುದಿಲ್ಲ ಎಂದು ಕೆಲವು ಅಧ್ಯಯನ ತಿಳಿಸಿದರೂ, ಅತಿ ಹೆಚ್ಚಿನ ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಎದುರಿಗಿನ ವ್ಯಕ್ತಿ ಜೊತೆಗಿನ ಸಂವಹನ ಮರೆಯುತ್ತಾನೆ ಎಂದು ಕೂಡ ತಿಳಿಸಿದೆ. ಸಾಮಾಜಿಕ ಮಾಧ್ಯಮದ ಮೇಲೆ ಮತ್ತೊಂದು ಹೊಸ ಅಧ್ಯಯನವು ಇವುಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮವನ್ನು ತಿಳಿಸಿದೆ.
ಆರೋಗ್ಯದಲ್ಲಿ ಸುಧಾರಣೆ: ಸಾಮಾಜಿಕ ಮಾಧ್ಯಮಗಳ ಕುರಿತು ಹೊಸ ಅಧ್ಯಯನವೊಂದು ಜರ್ನಲ್ ಆಫ್ ಟೆಕ್ನಾಲಜಿ ಇನ್ ಬಿಹೇವಿಯರ್ ಸೈನ್ಸ್‌ನಲ್ಲಿ ಪ್ರಕಟಿಸಲಾಗಿದೆ. ಇದರನುಸಾರ ವ್ಯಕ್ತಿಯೊಬ್ಬ ಕನಿಷ್ಠ 15 ನಿಮಿಷಗಳ ಕಾಲ ಸಾಮಾಜಿಕ ಮಾಧ್ಯಮಗಳ ಬಳಕೆ ಕಡಿಮೆ ಮಾಡುವುದರಿಂದ ಆರೋಗ್ಯ ಮತ್ತು ಪ್ರತಿರಕ್ಷಣಾ ಕಾರ್ಯದಲ್ಲಿ ಗಣನೀಯ ಸುಧಾರಣೆ ಕಂಡುಬರುತ್ತದೆ. ಒಬ್ಬಂಟಿತನ ಮತ್ತು ಖಿನ್ನತೆಯ ಮಟ್ಟ ಕೂಡ ಕಡಿಮೆಯಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.
ಶೇಕಡಾ 50ರಷ್ಟು ಆರೋಗ್ಯ ಅಭಿವೃದ್ಧಿ: ಸಾಮಾಜಿಕ ಮಾಧ್ಯಮ ಬಳಕೆಯನ್ನು ಕಡಿಮೆ ಮಾಡಿದ ಜನರಲ್ಲಿ ಶೀತ, ಜ್ವರ ಇನ್ನಿತರ ಆರೋಗ್ಯ ಸಮಸ್ಯೆ ಎದುರಿಸಿ ಪ್ರತಿರಕ್ಷಣಾ ಕಾರ್ಯದಲ್ಲಿ ಸರಾಸರಿ ಶೇ 15 ಸುಧಾರಣೆ ಹೊಂದಿದ್ದಾರೆ ಎಂದು ಅಧ್ಯಯನ ಹೇಳುತ್ತದೆ. ಅಷ್ಟೇ ಅಲ್ಲ, ಜನರ ನಿದ್ರೆಯ ಗುಣಮಟ್ಟದಲ್ಲಿಯೂ ಕೂಡ ಶೇ 50ರಷ್ಟು ಅಭಿವೃದ್ಧಿಯಾಗಿದ್ದು, ಶೇ 30ರಷ್ಟು ಮಾನಸೀಕ ಖಿನ್ನತೆ ಲಕ್ಷಣಗಳು ತಗ್ಗಿವೆ.