ಹೈದರಾಬಾದ್:ಊಟದ ನಂತರ ಪಾನ್ ಅಥವಾ ವೀಳ್ಯದೆಲೆ ತಿನ್ನುವುದು ಭಾರತೀಯ ಪದ್ಧತಿಗಳಲ್ಲೊಂದು. ಪ್ರತಿ ಭಾರತೀಯ ವಿವಾಹ ಅಥವಾ ಅದ್ದೂರಿ ಭೋಜನ ಕೂಟದಲ್ಲಿ ಎಲೆ ಅಡಕೆ ಅತ್ಯಗತ್ಯವಾಗಿರುತ್ತದೆ. ಏಕೆಂದರೆ ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ ಎಂಬ ಕಾರಣಕ್ಕೆ ಪಾನ್ ಹಾಕುವುದು ರೂಢಿಯಲ್ಲಿದೆ.
ಪಾನ್ನ ಮುಖ್ಯ ಘಟಕಾಂಶವಾಗಿರುವ ವೀಳ್ಯದೆಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ವೀಳ್ಯದೆಲೆ ಪಿಪೆರೇಸಿ (Piperaceae) ಕುಟುಂಬಕ್ಕೆ ಸೇರಿದ್ದು, ಇದನ್ನು ಸಸ್ಯಶಾಸ್ತ್ರೀಯವಾಗಿ ಪೈಪರ್ ಬೆಟೆಲ್ ಎಂದು ಕರೆಯಲಾಗುತ್ತದೆ. ಇದು ಅನೇಕ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಇದು ಕಾರ್ಯನಿರ್ವಹಿಸುತ್ತದೆ.
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ನ (ಎನ್ಸಿಬಿಐ) ಸಂಶೋಧನಾ ಲೇಖನದ ಪ್ರಕಾರ, ವಿಳ್ಯದೆಲೆಗಳು ಡಿಟಾಕ್ಸಿಫೈಯರ್ ಆಗಿ ಕಾರ್ಯನಿರ್ವಹಿಸುತ್ತವೆ. ಅಂದರೆ ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ನಿಯಮಿತವಾಗಿ ಇವುಗಳನ್ನು ಸೇವಿಸುವುದು ಬಾಯಿಯ ಕಾಯಿಲೆಗಳನ್ನು ನಿವಾರಿಸಲು ಮತ್ತು ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ. ಇದು ರೋಗ ನಿರೋಧಕ ಶಕ್ತಿ ವೃದ್ಧಿಸಲು ಮತ್ತು ಹೃದಯದ ಆರೋಗ್ಯಕ್ಕೂ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಇದರ ಜೊತೆಗೆ, ವಿಳ್ಯದೆಲೆ ಉತ್ಕರ್ಷಣ ನಿರೋಧಕ, ಆಂಟಿಡಿಯಾಬೆಟಿಕ್, ಉರಿಯೂತ ನಿವಾರಕ, ಆಂಟಿಕ್ಯಾನ್ಸರ್ ಮತ್ತು ಆಂಟಿಅಲ್ಸರ್ ಗುಣಗಳನ್ನು ಹೊಂದಿವೆ. ತಲೆನೋವು, ಕಣ್ಣಿನ ಸಮಸ್ಯೆ, ಕಿವಿ, ಬಾಯಿ ರೋಗಗಳು ಮತ್ತು ಮಕ್ಕಳಲ್ಲಿ ಶೀತ ನಿವಾರಣೆಗೆ ವೀಳ್ಯದೆಲೆಯ ಬಳಕೆಯು ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ, ಇದು ಕೆಮ್ಮು, ಶೀತ, ಹೃದಯದ ಸಮಸ್ಯೆಗಳು ಮತ್ತು ಉಸಿರಾಟದ ತೊಂದರೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.
ವೀಳ್ಯದೆಲೆಯಲ್ಲಿರುವ ಪೋಷಕಾಂಶಗಳೆಂದರೆ, ನೀರು, ಪ್ರೋಟೀನ್, ಕೊಬ್ಬು, ಖನಿಜ, ಫೈಬರ್, ಕ್ಲೋರೊಫಿಲ್, ಕಾರ್ಬೋಹೈಡ್ರೇಟ್, ನಿಕೋಟಿನ್ ಆಮ್ಲ, ವಿಟಮಿನ್ ಸಿ, ವಿಟಮಿನ್ ಎ, ರಿಬೋಫ್ಲಾವಿನ್, ಸಾರಜನಕ, ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಅಯೋಡಿನ್, ಕ್ಯಾಲೊರಿಗಳು, ಇತ್ಯಾದಿ. ಇವುಗಳ ಸೇವನೆಯು ಅನೇಕ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ:
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ವೀಳ್ಯದೆಲೆಯನ್ನು ಅಗಿಯುವುದರಿಂದ ನಮ್ಮ ಲಾಲಾರಸ ಗ್ರಂಥಿಗಳು ಹೆಚ್ಚು ಸಕ್ರಿಯವಾಗುತ್ತವೆ, ಇದು ಜೀರ್ಣಕ್ಕೆ ಸಹಾಯ ಮಾಡುವ ಹೆಚ್ಚಿನ ಸಂಖ್ಯೆಯ ಕಿಣ್ವಗಳನ್ನು ಉತ್ಪಾದಿಸುತ್ತದೆ. ಈ ಎಲೆಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ಜೀರ್ಣಾಂಗ ವ್ಯವಸ್ಥೆಯಿಂದ ಹಾನಿಕಾರಕ ಸ್ವತಂತ್ರ ರಾಡಿಕಲ್ ಮತ್ತು ವಿಷವನ್ನು ತೆಗೆದುಹಾಕುತ್ತದೆ. ಇದು ಹೊಟ್ಟೆಯಲ್ಲಿ ಪಿಹೆಚ್ ಅಸಮತೋಲನದಿಂದ ಉಂಟಾಗುವ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಯಂತ್ರಿಸುತ್ತದೆ. ಜೊತೆಗೆ ಗ್ಯಾಸ್ಟ್ರಿಕ್ ಮತ್ತು ಮಲಬದ್ಧತೆ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಇದು ಹಸಿವನ್ನು ಹೆಚ್ಚಿಸಲು ಕೂಡಾ ಸಹಾಯ ಮಾಡುತ್ತದೆ.
ದಂತ ಆರೋಗ್ಯಕ್ಕೆ ಪ್ರಯೋಜನಕಾರಿ:
ಪಾನ್ ಅನ್ನು ಸಾಮಾನ್ಯವಾಗಿ ಮೌತ್ ಫ್ರೆಶ್ನರ್ ಎಂದು ಕರೆಯಲಾಗುತ್ತದೆ. ಇದು ಬಾಯಿಯ ಕೆಟ್ಟ ವಾಸನೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಆದಾಗ್ಯೂ, ವೀಳ್ಯದೆಲೆಯ ಔಷಧೀಯ ಗುಣಗಳು ರೋಗಾಣುಗಳು, ಬ್ಯಾಕ್ಟೀರಿಯಾಗಳು ಮತ್ತು ಬಾಯಿಯಲ್ಲಿ ರೋಗಗಳನ್ನು ಉಂಟುಮಾಡುವ ಇತರ ರೋಗಕಾರಕಗಳಿಂದ ರಕ್ಷಿಸುತ್ತವೆ. ವೀಳ್ಯದೆಲೆಯನ್ನು ಅಗಿಯುವುದರಿಂದ ಹಲ್ಲಿನ ಕೊಳೆತ ಸಮಸ್ಯೆಗಳಿಗೂ ಪರಿಹಾರವಾಗುತ್ತದೆ ಮತ್ತು ಒಸಡುಗಳು ಹಾಗೂ ಹಲ್ಲುಗಳನ್ನು ಬಲಪಡಿಸುತ್ತದೆ. ಇದು ಬಾಯಿಯಲ್ಲಿ ರಕ್ತಸ್ರಾವವಾಗುವುದಕ್ಕೂ ಪರಿಹಾರ ನೀಡುತ್ತದೆ.
ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ:
ಕೆಲವು ಉಸಿರಾಟದ ತೊಂದರೆಗಳನ್ನು ನಿವಾರಿಸಲು ವೀಳ್ಯದೆಲೆ ಸಹಾಯ ಮಾಡುತ್ತವೆ. ಕೆಮ್ಮು, ಎದೆ ಅಥವಾ ಶ್ವಾಸಕೋಶದ ಸೋಂಕು ಮತ್ತು ಆಸ್ತಮಾದಂತಹ ಸಮಸ್ಯೆಗಳಿಗೆ ಇದು ತುಂಬಾ ಸಹಾಯಕವಾಗಿದೆ. ಕಫವನ್ನು ನಿವಾರಿಸಲು ಸಹಾಯ ಮಾಡುತ್ತದೆ. ವೀಳ್ಯದೆಲೆ ಹಾಕಿ ಕುದಿಸಿದ ನೀರಿನಿಂದ ಬಾಯಿಯನ್ನು ಗಾರ್ಗಿಲ್ ಮಾಡುವುದು ಗಂಟಲಿನ ಸಮಸ್ಯೆಗಳಿಗೆ ಒಳ್ಳೆಯದು.
ಉತ್ತಮ ಮೂತ್ರವರ್ಧಕ: