ಯಾದಗಿರಿ :ಜಿಲ್ಲೆಯ ಪರಸಾಪೂರ ಗ್ರಾಮದಲ್ಲಿ ಗುರುವಾರ ಸಂಭ್ರಮ ಮನೆ ಮಾಡಿತ್ತು. ನೂತನ ಬಸ್ ಸಂಚಾರ (first time bus service to village) ಆರಂಭವಾಗಿರೋದು ಈ ಸಂಭ್ರಮಕ್ಕೆ ಕಾರಣ. ದೇಶಕ್ಕೆ ಸ್ವಾತಂತ್ರ‍್ಯ ಬಂದು 74 ವರ್ಷ ಕಳೆದರೂ ಬಸ್ ಸಂಚಾರವನ್ನೇ ಕಾಣದ ಗ್ರಾಮದಲ್ಲಿ ಸಾರಿಗೆ ಸಂಸ್ಥೆಯ ಬಸ್ ಬಂದು ನಿಂತಾಗ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಗ್ರಾಮಸ್ಥರೆಲ್ಲರೂ ಸೇರಿ ಬಸ್ ಚಾಲಕ, ನಿರ್ವಾಹಕರನ್ನು ಸನ್ಮಾನಿಸಿ, ಬಸ್‌ಗೆ ವಿಶೇಷ ಪೂಜೆ ಸಲ್ಲಿಸಿ, ಸಂಚಾರಕ್ಕೆ ಚಾಲನೆ ನೀಡಿದರು.
ಮೊದಲ ಬಾರಿ ಗ್ರಾಮಕ್ಕೆ ಬಂದ ಬಸ್ ಕಂಡು ಖುಷಿಯಲ್ಲಿ ಮಿಂದೆದ್ದ ಮಕ್ಕಳು, ಗ್ರಾಮಸ್ಥರು.. ಸುಮಾರು 1000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಯಾದಗಿರಿ ವಿಧಾನಸಭೆ ಕ್ಷೇತ್ರದ ಕಟ್ಟ ಕಡೆಯ ಗ್ರಾಮ ಪರಸಾಪೂರ. ಈ ಗ್ರಾಮದಲ್ಲಿ ರಸ್ತೆಗಳಿದ್ದರೂ ಬಸ್ ಸಂಚಾರ ಇರಲಿಲ್ಲ. ಇದರಿಂದ ಗ್ರಾಮಸ್ಥರು ತುರ್ತು ಕೆಲಸಗಳಿಗೆ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿತ್ತು.
ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸುಮಾರು 7 ಕಿ.ಮೀ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾತ್ರಿ ಹೊತ್ತಲ್ಲಿ ಸಂಚರಿಸಲು ಮಹಿಳೆಯರು ಭಯ ಪಡುತ್ತಾರೆ. ಸಂಚಾರಕ್ಕೆ ತುಂಬ ಕಷ್ಟಕರವಾಗಿದೆ ಎಂದು ಗ್ರಾಮಸ್ಥರು ಮೇಲಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ನಂತರ ಬಿಜೆಪಿ ಮುಖಂಡ ಚಂದ್ರಶೇಖರ್ ಮಾಗನೂರ ಬಳಿ ಬಸ್ ಸೌಲಭ್ಯ ಕಲ್ಪಿಸುವಂತೆ ಅಳಲು ತೋಡಿಕೊಂಡಾಗ, ಅವರು ಕೆಸ್‌ಆರ್‌ಟಿಸಿ ಯಾದಗಿರಿಯ ಡಿಸಿ ಮತ್ತು ಸಾರಿಗೆ ಸಚಿವ ಶ್ರೀರಾಮಲು ಅವರಲ್ಲಿ ಈ ಕುರಿತು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿ ಬಸ್ ಸೌಕರ್ಯ ಒದಗಿಸಿ ಕೊಟ್ಟಿದ್ದಕ್ಕಾಗಿ ಸಚಿವರಿಗೆ ಅಭಿನಂದನೆಗಳನ್ನ ಸಲ್ಲಿಸಿದರು. ಅಲ್ಲದೆ, ಜಿಲ್ಲೆಯ ಅನೇಕ ಗ್ರಾಮಗಳಿಗೆ ಬಸ್ ವ್ಯವಸ್ಥೆ ಹಾಗೂ ಮೂಲ ಸೌಲಭ್ಯಗಳು ಒದಗಿಸುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು.