ಯಾದಗಿರಿ:ಜಿಲ್ಲೆಯ ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಪತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಕಥೆ ಸೃಷ್ಟಿಸಿ ಕಣ್ಣೀರು ಹಾಕಿದ್ದ ಹಂತಕಿ ಪತ್ನಿ ಜೈಲು ಪಾಲಾಗಿರುವ ಘಟನೆ ನಡೆದಿದೆ. ಕಳೆದ ಜೂ. 15 ರಂದು ಕಾಶೆಪ್ಪ ಎಂಬ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಕೊಂಕಲ್ ಗ್ರಾಮದ ಜಮೀನಿನ ಮರವೊಂದಕ್ಕೆ ನೇಣು ಬೀಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಈ ಘಟನೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಕಾಶೆಪ್ಪ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ. ಹೀಗಾಗಿ, ಸಾವಿನ ಬಗ್ಗೆ ಸಂಶಯವಿದೆ ಎಂದು ಗುರುಮಠಕಲ್ ಠಾಣೆಯಲ್ಲಿ ಮೃತ ಕಾಶೆಪ್ಪನ ಸಹೋದರಿ ಕಾಶೆಮ್ಮ ದೂರು ನೀಡಿದ್ದರು. ಈ ಬಗ್ಗೆ ಗುರುಮಠಕಲ್ ಸಿಪಿಐ ದೌಲತ್ .ಎನ್. ಕುರಿ ಅವರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಅನೈತಿಕ ಸಂಬಂಧವೇ ಕೊಲೆಗೆ ಕಾರಣ:ತಾಲೂಕಿನ ಕೊಂಕಲ್ ಗ್ರಾಮದ ಕಾಶೆಪ್ಪ ಹಾಗೂ ಅನಿತಾ ದಂಪತಿಗಳು ಕೃಷಿ ಮಾಡಿಕೊಂಡು ನೆಮ್ಮದಿ ಬದುಕು ಕಟ್ಟಿಕೊಂಡಿದ್ದರು. ದಂಪತಿಗೆ 15 ವರ್ಷದ ಹಿಂದೆ ಮದುವೆಯಾಗಿತ್ತು. ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ. ಆದರೆ, ಕಾಶೆಪ್ಪನ ಪತ್ನಿಯು ಮನೆ ಹಿಂಭಾಗದ ನಾಗೇಶ್ ಎಂಬುವವರ ಜಮೀನನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಜಮೀನು ಕೆಲಸಕ್ಕೆ ಹೋದಾಗ ಅನಿತಾ ಹಾಗೂ ನಾಗೇಶನ ನಡುವೆ ಪ್ರೇಮಾಂಕುರವಾಗಿದೆ. ಕಳೆದ ಮೂರು ವರ್ಷದಿಂದ ಇವರು ವಿವಾಹೇತರ ಸಂಬಂಧ ಹೊಂದಿದ್ದರು.
ಈ ವಿಷಯವಾಗಿ ಕಾಶೆಪ್ಪ ಹಾಗೂ ಅನಿತಾ ನಡುವೆ ಸಾಕಷ್ಟು ಬಾರಿ ಜಗಳವಾಗಿತ್ತು. ಈ ಬಗ್ಗೆ ಕುಟುಂಬದವರು ತಿಳಿ ಹೇಳಿದ್ದರು ನಾಗೇಶ್ ಮತ್ತು ಅನಿತಾರ ವಿವಾಹೇತರ ಸಂಬಂಧ ಮುಂದುವರೆದಿತ್ತು. ಎರಡು ತಿಂಗಳ ಹಿಂದೆ ನಾಗೇಶ ಬೆಂಗಳೂರಿಗೆ ತೆರಳಿದ್ದ, ಆದರೂ ಇಬ್ಬರು ಫೋನಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ, ಇಬ್ಬರು ಕಾಶೆಪ್ಪನನ್ನು ಕೊಲೆ ಮಾಡಲು ಸ್ಕೇಚ್ ಹಾಕಿದ್ದರು. ನಂತರ ಬೆಂಗಳೂರಿನಿಂದ ವಾಪಾಸ್ ಬಂದಿದ್ದ ನಾಗೇಶ ತಾನು ಬೆಂಗಳೂರಿನಲ್ಲಿ ಇದ್ದೆನೆಂದು ಸೃಷ್ಟಿಸಲು ಹಗಲು ಹೊತ್ತಿನಲ್ಲಿ ಊರಿನಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.