ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ 10ಕ್ಕೂ ಹೆಚ್ಚು ಕಾರುಗಳು ಜಖಂಗೊಂಡಿದ್ದು, ಇಬ್ಬರಿಗೆ ಸಣ್ಣಪುಟ್ಟಗಾಯಗಳಾಗಿವೆ. ಈ ಸಂಬಂಧ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡು 18 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಯಾದಗಿರಿ ಜಿಲ್ಲಾ ಎಸ್ಪಿ ಡಾ.ಸಿ.ಬಿ ವೇದಮೂರ್ತಿ ತಿಳಿಸಿದ್ದಾರೆ.
144 ಸೆಕ್ಷನ್ ಜಾರಿ: ಈ ಕುರಿತು ಪ್ರತಿಕ್ರಿಯಿಸಿದ ಅವರು "ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಮೂರು ಕೆಎಸ್ಆರ್ಪಿ ಮತ್ತು ಒಂದು ಪ್ಯಾರಾ ಮಿಲಿಟರಿ ಫೋರ್ಸ್ ಕಂಪನಿ, ಇಬ್ಬರು ಡಿಎಸ್ಪಿ, 100 ಮಂದಿ ಪೊಲೀಸ್ ಕಾನ್ಸ್ಟೇಬಲ್, ಐದು ಮಂದಿ ಸಿಪಿಐ ಮತ್ತು 10 ಮಂದಿ ಪಿಎಸ್ಐ ಅವರನ್ನು ನೇಮಿಸಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸುರಪುರ ಮತ ಕ್ಷೇತ್ರದಾದ್ಯಂತ ಏ.6 ಸಂಜೆ 8 ಗಂಟೆಯಿಂದ ಏ.8 ರವರೆಗೆ ಸಂಜೆ 8 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಒಟ್ಟಾರೆಯಾಗಿ ದಾಖಲಾದ ನಾಲ್ಕು ಪ್ರಕರಣಗಳಲ್ಲಿ 120 ಜನ ಆರೋಪಿಗಳು ಭಾಗಿಯಾಗಿದ್ದು, ದಸ್ತಗಿರಿ ಕ್ರಮ ಮುಂದುವರೆದಿದೆ" ಎಂದು ತಿಳಿಸಿದರು.
ಆರೋಪಿಗಳಿಗೆ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ:ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಹಾಗೂ ಅವರ ಬೆಂಬಲಿಗರೊಂದಿಗೆ ಚುನಾವಣೆ ಪ್ರಚಾರಕ್ಕೆ ಎಂದು ನಾರಾಯಣಪುರ ಗ್ರಾಮಕ್ಕೆ ಪ್ರಯಾಣ ಬೆಳೆಸುತ್ತಿರುವ ಸಂದರ್ಭದಲ್ಲಿ ಕೊಡೇಕಲ್ ಪಟ್ಟಣದ ಬಿಜೆಪಿ ಕಾರ್ಯಕರ್ತರು ಏಕಾಏಕಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ವಾಹನಗಳ ಮೇಲೆ ಕಲ್ಲು ತೋರಾಟ ನಡೆಸಿದ್ದರು. ಈ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇಂದು ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹುಣಸಗಿ ಪಟ್ಟಣದ ಸಿಪಿಐ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಆಗಮಿಸಿ ಕ್ರಮದ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಗಿದೆ.