ಯಾದಗಿರಿ: ಮೂರನೇ ಹಂತದ ಕೋವಿಡ್ ಲಸಿಕೆ ಪಡೆಯಲು ಗ್ರಾಮೀಣ ಭಾಗದಲ್ಲಿ ಜನರು ಮುಗಿಬಿದ್ದಿದ್ದಾರೆ. ಲಸಿಕೆ ಪಡೆಯಲು ಕೊರೊನಾ ಸೈನಿಕರು ಹಿಂದೇಟು ಹಾಕಿದ್ರೆ, ಗ್ರಾಮೀಣ ಭಾಗದ ಜನರು ಮಾತ್ರ ಹೆಚ್ಚಿನ ಆಸಕ್ತಿ ವಹಿಸಿ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಈಗಾಗಲೇ 53 ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 10 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಆದರೆ ನಿಗದಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಈಗ ಎರಡನೇ ಕೋವಿಡ್ ಅಲೆ ಆರಂಭವಾಗಿದ್ದು, ಆತಂಕಗೊಂಡ ಗ್ರಾಮೀಣ ಭಾಗದ ಜನರು ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸುಕರಾಗಿ ಲಸಿಕೆ ಪಡೆಯುತ್ತಿದ್ದಾರೆ.