ಗುರುಮಠಕಲ್(ಯಾದಗಿರಿ): ಹಣ್ಣು, ತರಕಾರಿ, ಪ್ರಾಣಿ-ಪಕ್ಷಿಗಳ ಹೆಸರು, ಅವುಗಳ ವೈಜ್ಞಾನಿಕ ಹೆಸರನ್ನು ಸುಲಲಿತವಾಗಿ ಹೇಳುವ ಮೂಲಕ ಯಾದಗಿರಿ ಜಿಲ್ಲೆಯ ಗುರುಮಠಕಲ್ ಬಾಲಕಿ ಈಗ ದಾಖಲೆ ಮಾಡಿದ್ದಾಳೆ. ಶೈಕ್ಷಣಿಕವಾಗಿ ಹಿಂದುಳಿದಿರುವ ಯಾದಗಿರಿ ಜಿಲ್ಲೆಗೆ ವಿದ್ಯಾರ್ಥಿ ಶುಭಶ್ರೀ ಕೀರ್ತಿ ತರುವ ಕೆಲಸ ಮಾಡಿದ್ದಾಳೆ.
ಲಾಕ್ಡೌನ್ ಅವಧಿಯಲ್ಲಿ ಸಮಯವನ್ನು ಸದುಪಯೋಗ ಮಾಡಿಕೊಂಡು ಪಠ್ಯದ ಜೊತೆಗೆ ಇನ್ನಿತರೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ್ದಾಳೆ ಗುರುಮಠಕಲ್ ನಗರದ 11 ವರ್ಷದ ಬಾಲಕಿ ಶುಭಶ್ರೀ. ಗುರುಮಠಕಲ್ ನಗರದ ಫ್ರೆಂಟ್ ಲೈನ್ ಎಜ್ಯುಕೇಶನ್ ಸೊಸೈಟಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿರುವ ಈಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಕರ್ನಾಟಕ ಅಚೀವರ್ಸ್ ರೆಕಾರ್ಡ್ ಆಫ್ ಬುಕ್ ನಲ್ಲಿ ಸ್ಥಾನ ಪಡೆದು ಮೆಡಲ್ ಹಾಗೂ ಸರ್ಟಿಫಿಕೇಟ್ ಪಡೆದುಕೊಂಡಿದ್ದಾಳೆ.