ಗುರುಮಠಕಲ್:ನೂತನ ತಾಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ಚುನಾವಣೆ ನಿಗದಿಯಾಗಿದ್ದು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ.
ಹೊಸ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲು ಇರಿಸಲಾಗಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಅಲ್ಲದೆ ಗುರುಮಠಕಲ್ ತಾಲೂಕು ಪಂಚಾಯತಿ 12 ಸದಸ್ಯ ಬಲ ಹೊಂದಿದ್ದು, ಇಷ್ಟು ವರ್ಷಗಳ ಕಾಲ ಯಾದಗಿರಿ ತಾಲೂಕು ಪಂಚಾಯಿತಿ ವ್ಯಾಪ್ತಿಗೊಳಪಡುತ್ತಿತ್ತು. ಈಗ ಹೊಸ ತಾಲೂಕು ಪಂಚಾಯಿತಿಯಾಗಿ ಸ್ವತಂತ್ರವಾಗಿ ಕಾರ್ಯಭಾರ ಮಾಡಲಿದೆ.
ನೂತನವಾಗಿ ರಚನೆಯಾಗಿರುವ ಗುರುಮಠಕಲ್ ತಾಲೂಕು ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗಾಗಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಅಧ್ಯಕ್ಷ ಸ್ಥಾನಕ್ಕಾಗಿ 4 ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿದೆ. ಎಲ್ಲ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರಗಾರಿಕೆ ನಡೆಯುತ್ತಿದೆ. ರಾಜ್ಯದ ಅತಿ ಹಿಂದುಳಿದ ಜಿಲ್ಲೆ ಯಾದಗಿರಿ ಭಾಗವನ್ನು ವಿಭಜಿಸಿ ತೆಲಂಗಾಣ ಗಡಿ ತಾಲೂಕ ಅತಿ ಹಿಂದುಳಿದ ಗುರುಮಠಕಲ್ ತಾಲೂಕು ರಚನೆಯಾದ ಬಳಿಕ, ಪ್ರಾದೇಶಿಕವಾರು ಹಂಚಿಕೆಯಡಿ ನೂತನ ಗುರುಮಠಕಲ್ ತಾಲೂಕಿಗೆ 12 ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ.
ಇನ್ನು, ಅಧಿಕಾರದ ಚುಕ್ಕಾಣಿ ಹಿಡಿಯಲು 7 ಸದಸ್ಯರ ಅವಶ್ಯಕತೆಯಿದ್ದು ಕಾಂಗ್ರೆಸ್ 6, ಜೆಡಿಎಸ್ 4, ಬಿಜೆಪಿಯ 2 ಸದಸ್ಯರಿದ್ದಾರೆ. ಆದರೆ, ಕಾಂಗ್ರೆಸ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಸದಸ್ಯರಿಲ್ಲದ್ದರಿಂದ, ಕೈ ನಾಯಕರಿಗೆ ತಲೆನೋವಾಗಿದೆ. 40 ವರ್ಷಗಳ ಕಾಲ ಗುರುಮಿಠಕಲ್ನಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಹೊಸ ತಾಲೂಕು ಪಂಚಾಯಿತಿ ಗದ್ದುಗೆ ಹಿಡಿಯಲಾರದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಈ ಕಾರಣದಿಂದ ಪಕ್ಷದ ಮುಖಂಡರು ಬಿಜೆಪಿ ಸದಸ್ಯರನ್ನು ಸಂಪರ್ಕಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಕಾಂಗ್ರೆಸ್‌ನ ಮೂರು ಜನ ಸದಸ್ಯರು ಕೈ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲದ ಪರಿಣಾಮ, ಕೈ ನಾಯಕರು ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ತಾಲೂಕು ಪಂಚಾಯಿತಿಯ ಅವಧಿ ಇನ್ನೂ 10 ತಿಂಗಳಷ್ಟೇ ಬಾಕಿಯಿದ್ದು, ಇಂದು ಜೆಡಿಎಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಎರಡು ಸದಸ್ಯರು ರೇಸ್‌ನಲ್ಲಿದ್ದಾರೆ. ಬಿಜೆಪಿಯಿಂದ ಅಧ್ಯಕ್ಷ ಗದ್ದುಗೆ ಒಬ್ಬ ಸದಸ್ಯ ಅರ್ಹರಿದ್ದಾರೆ.
ತಾಲೂಕು ಪಂಚಾಯಿತಿಯ ಅಧ್ಯಕ್ಷ ಸ್ಥಾನ (ಎಸ್,ಸಿ) ಪುರುಷರಿಗೆ ಮೀಸಲಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದೆ. ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ತಾಲೂಕು ಪಂಚಾಯಿತಿಯಲ್ಲಿ ಜೆಡಿಎಸ್ಗೆ ಬಹುಮತ ಇಲ್ಲದಿದ್ದರೂ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿದ್ದಾರೆ.
ತಾಲೂಕು ಪಂಚಾಯಿತಿ ಅಧಿಕಾರದ ಚುಕ್ಕಾಣಿ ಯಾರ ಹೆಗಲೇರಲಿದೆ ಎಂಬ ಕುತೂಹಲವನ್ನು ಸೋಮವಾರದವರೆಗೂ ಹಿಡಿದಿಡಬೇಕಿದೆ.