ಯಾದಗಿರಿ :ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ವಿವಿಧ ಯೋಜನೆಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಶನಿವಾರ ದೇಶದ ಆಯ್ದ 5 ಜಿಲ್ಲಾಧಿಕಾರಿಗಳ ಜೊತೆ ನಡೆಸಿದ ವಿಡಿಯೋ ಸಂವಾದದಲ್ಲಿ ವಿವಿಧ ಯೋಜನೆಗಳ ಕಾರ್ಯಕ್ರಮಗಳ ಅನುಷ್ಠಾನ ವಿಚಾರದಲ್ಲಿ ಯಾದಗಿರಿ ಜಿಲ್ಲೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು.
ವಿಡಿಯೋ ಸಂವಾದದಲ್ಲಿ ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚಿಸಿದ ಪ್ರಧಾನಿ ಮೋದಿ ಅವರಿಗೆ ವಿಸ್ತೃತ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಆರ್. ರಾಗಪ್ರಿಯಾ, ಯಾದಗಿರಿ ಜಿಲ್ಲೆಯು ಅಭಿವೃದ್ಧಿಯತ್ತ ಬಲವಾದ ಮತ್ತು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ ಎಂದರು.
ಈ ಮೊದಲು ಆರೋಗ್ಯ ಕ್ಷೇತ್ರದಲ್ಲಿ ಯಾದಗಿರಿಯಲ್ಲಿ ರಕ್ತಹೀನತೆಯ ಸಮಸ್ಯೆಗಳಿದ್ದವು. ಹೀಗಾಗಿ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹೀಮೋಗ್ಲೋಬಿನ್ ಪರೀಕ್ಷೆ ಮಾಡಲು ಆಶಾ ಕಾರ್ಯಕರ್ತೆಯರು ಮತ್ತು ಎಎನ್ಎಂಗಳಿಗೆ ತರಬೇತಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಲಾಯಿತು ಎಂದು ಪ್ರಧಾನಿಗೆ ಜಿಲ್ಲಾಧಿಕಾರಿ ಡಾ.ಆರ್. ರಾಗಪ್ರಿಯಾ ತಿಳಿಸಿದರು.
ಮಹಿಳೆಯರಿಗೆ ಶಕ್ತಿ ಕಿಟ್ ವಿತರಣೆ
ಮಹಿಳೆಯರನ್ನು ಪರೀಕ್ಷಿಸಿ ಅವರಲ್ಲಿ ರಕ್ತಹೀನತೆ ಕಂಡು ಬಂದಾಗ ಅವರಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ಹಾಗೂ ಪೂರಕ ಪೋಷಣೆ ಮತ್ತು ಶಕ್ತಿ ಕಿಟ್ಗಳನ್ನು ನೀಡಲಾಯಿತು. ಇದರ ಮೂಲಕ ರಕ್ತಹೀನತೆಯ ಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಯಾದಗಿರಿ ಜಿಲ್ಲೆ ಸುಧಾರಣೆ ಕಂಡಿದೆ ಎಂದು ಪ್ರಧಾನಿಗಳೆದುರು ಸಂವಾದದಲ್ಲಿ ಹೇಳಿದ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ, ಪ್ರೌಢಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಬೆಳೆಗಳ ಬಗ್ಗೆ ಪ್ರಧಾನಿಗೆ ಮಾಹಿತಿ
ಯಾದಗಿರಿ ಜಿಲ್ಲೆಯಲ್ಲಿ ರೈತರು ಬೆಳೆಯುವ ಬೆಳೆಗಳ ಬಗ್ಗೆಯೂ ಪ್ರಧಾನಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರಾಗಪ್ರಿಯಾ, ಜಿಲ್ಲೆಯು ರಾಜ್ಯದ ಈಶಾನ್ಯ ಭಾಗದಲ್ಲಿದೆ. 14 ಲಕ್ಷ ಜನಸಂಖ್ಯೆ ಮತ್ತು 6 ತಾಲೂಕುಗಳನ್ನು ಹೊಂದಿದೆ. ಇಲ್ಲಿ ಫಲವತ್ತಾದ ಕಪ್ಪು ಮಣ್ಣು ಇದ್ದು, ಇಲ್ಲಿ ಭತ್ತ, ಹತ್ತಿ, ಕಡಲೆಕಾಯಿ ಮತ್ತು ತೊಗರಿ ಬೆಳೆ ಪ್ರಮುಖ ಬೆಳೆಗಳಾಗಿವೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 2 ಪ್ರಮುಖ ನದಿಗಳಾದ ಕೃಷ್ಣಾ ಮತ್ತು ಭೀಮಾ ನದಿಗಳಿಂದ ಸುತ್ತುವರಿದಿದೆ. ಜವಳು ಪೀಡಿತ ಪ್ರದೇಶಗಳಲ್ಲಿ ಸಣ್ಣ ರೈತರು ಮೀನುಗಾರಿಕೆಯನ್ನು ಕೈಗೊಳ್ಳಲು ಪ್ರೋತ್ಸಾಹಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಅಧಿಕಾರಿಗಳು ಅಕ್ರಮ ಆಸ್ತಿ ಮಾಡುವುದು ಅಕ್ಷಮ್ಯ ಅಪರಾಧ : ಭ್ರಷ್ಟ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಐಜಿಪಿ ಡಿ ರೂಪಾ