ಸುರಪುರ (ಯಾದಗಿರಿ):ವಿಶ್ವ ಪ್ರಸಿದ್ಧವಾದ ಐತಿಹಾಸಿಕ ಸ್ಮಶಾನ ಎಂದೇ ಖ್ಯಾತಿ ಪಡೆದ ರಾಜಕೊಳ್ಳೂರಿನ ಸ್ಮಶಾನ ತಾಣ ಇಂದು ಅಭಿವೃದ್ಧಿ ಇಲ್ಲದೆ ಅನಾಥವಾಗಿದೆ. ರಾಜನಕೊಳ್ಳೂರಿನ ಜನರು ಬುಡ್ಡರ ಮನೆ ಎಂದು ಕರೆಯುವ ಈ ಸ್ಥಳಕ್ಕೆ ತನ್ನದೇ ಆದ ಇತಿಹಾಸವಿದೆ.
ಹಿಂದೆ ಸುರಪುರ ತಾಲೂಕಿನ ಹಾಗೂ ಸದ್ಯ ಹುಣಸಗಿ ತಾಲೂಕಿನ ರಾಜನಕೊಳ್ಳೂರು ಗ್ರಾಮದ ಹೊರ ಭಾಗದಲ್ಲಿ ಸುಮಾರು ಹತ್ತು ಎಕರೆಯಷ್ಟು ಬಯಲು ಸ್ಥಳವಿದ್ದು, ಈ ಸ್ಥಳದಲ್ಲಿ 50ಕ್ಕೂ ಹೆಚ್ಚು ಗೋರಿಗಳು ಕಾಣಸಿಗುತ್ತವೆ. ಈ ಗೋರಿಗಳಿರುವ ಸ್ಥಳವೇ ಇಂದು ವಿಶ್ವ ಪ್ರಸಿದ್ಧ ಸ್ಮಶಾನವಾಗಿ ಹೆಸರುವಾಸಿಯಾಗಿದೆ.
ಕೇಂದ್ರಿಯ ಪುರಾತತ್ವ ಇಲಾಖೆ ಈ ಸ್ಥಳದಲ್ಲಿ ಉತ್ಖನನಗೊಳಿಸಿದ್ದು, ಇಲ್ಲಿರುವ ಗೋರಿಗಳನ್ನು ಸುಮಾರು 2600 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅಂದಿನ ಕಾಲದಲ್ಲಿಯೂ ಜನರು ಮುಂದುವರೆದು ಗೋರಿಗಳ ನಿರ್ಮಾಣದ ಕಲ್ಪನೆ ಹೊಂದಿದ್ದರು.
ಈ ಗೋರಿಗಳ ವಿಶೇಷತೆ ಅಂದ್ರೆ 2600 ವರ್ಷಗಳ ಹಿಂದೆ ಬದುಕಿದ್ದ ಮಾನವರು ತಮ್ಮವರ ಮರಣದ ನಂತರ ಅವರನ್ನು ಮಣ್ಣು ಮಾಡಿದ ನಂತರ ಅವರೊಂದಿಗೆ ಆ ವ್ಯಕ್ತಿ ಬಳಸಿದ ಎಲ್ಲಾ ವಸ್ತುಗಳನ್ನು ಮಣ್ಣಲ್ಲಿ ಹಾಕುತ್ತಿದ್ದರು. ನಂತರ ಆ ಗೋರಿಯ ಮೇಲೆ ಬಂಡೆಗಳಿಂದ ಚಿಕ್ಕ ಮನೆಗಳ ರೀತಿ ನಿರ್ಮಾಣ ಮಾಡಿ ಗೋರಿಗಳನ್ನು ಕಾಪಾಡಲಾಗಿದೆ. ಇದರಿಂದಲೇ ಸ್ಮಶಾನ 2600 ವರ್ಷಗಳಿಂದ ಉಳಿದುಕೊಂಡಿವೆ ಎನ್ನುವ ಕುರಿತು ಪುರಾತತ್ವ ಇಲಾಖೆ ಈ ಸ್ಥಳದಲ್ಲಿ ನಾಮಫಲಕಗಳನ್ನು ಅಳವಡಿಸಿದೆ.
ಇಂತಹ ಪ್ರಸಿದ್ಧ ಸ್ಥಳವನ್ನು ಅಭಿವೃದ್ಧಿಪಡಿಸಿದೆ ಪುರಾತತ್ವ ಇಲಾಖೆ ನಿರ್ಲಕ್ಷ್ಯ ತೋರಿದೆ. ಕುಡಿಯಲು ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಸ್ವಲ್ಪಮಟ್ಟಿನ ಮೂಲ ಸೌಕರ್ಯಗಳನ್ನು ಒದಗಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.