ಕರ್ನಾಟಕ

karnataka

ETV Bharat / state

ಚಿಂಚನಸೂರ್ ಪರ ಸೂಚಕರಾಗಿ ಪತ್ನಿ ಅಮರೇಶ್ವರಿ ನಾಮಪತ್ರ ಸಲ್ಲಿಕೆ - ಈಟಿವಿ ಭಾರತ ಕನ್ನಡ

ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್​ ಚಿಂಚನಸೂರ್ ಪರವಾಗಿ ಪತ್ನಿ ಅಮರೇಶ್ವರಿ ಚಿಂಚನಸೂರ್ ನಾಮಪತ್ರ ಸಲ್ಲಿಕೆ ಮಾಡಿದರು.

wife-amareshwari-submits-nomination-on-behalf-of-baburao-chinchansur
ಚಿಂಚನಸೂರ್ ಪರ ಸೂಚಕರಾಗಿ ಪತ್ನಿ ಅಮರೇಶ್ವರಿ ನಾಮಪತ್ರ ಸಲ್ಲಿಕೆ

By

Published : Apr 17, 2023, 5:40 PM IST

ಚಿಂಚನಸೂರ್ ಪರ ಸೂಚಕರಾಗಿ ಪತ್ನಿ ಅಮರೇಶ್ವರಿ ನಾಮಪತ್ರ ಸಲ್ಲಿಕೆ

ಯಾದಗಿರಿ :ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್​ ಚಿಂಚನಸೂರ್ ಪರವಾಗಿ ಪತ್ನಿ ಅಮರೇಶ್ವರಿ ಚಿಂಚನಸೂರ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು. ಗುರುಮಠಕಲ್ ತಹಸೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿ ಸಂತೋಷ್ ಕುಮಾರ ಪಾಟೀಲ್ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ ಪರವಾಗಿ ಅವರ ಪತ್ನಿ ನಾಮಪತ್ರ ಸಲ್ಲಿಸಿದರು. ಅಮರೇಶ್ವರಿ ಚಿಂಚನಸೂರ್ ಅವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್​ ನಾಯಕರು ಸಾಥ್ ನೀಡಿದರು.

ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಮರೇಶ್ವರಿ ಚಿಂಚನಸೂರ್, ಕಾರ್ಯಕರ್ತರಿಗೆ ಕೈ ಮುಗಿದು ಆಶೀರ್ವಾದ ಪಡೆಯಲು ಬಾಬುರಾವ್​ ಚಿಂಚನಸೂರ್ ಅವರು ಬೇಕು. ಜನರ ಸಂಪೂರ್ಣ ಆಶೀರ್ವಾದ ಅವರ ಮೇಲಿದೆ. ಜನರ ಮೇಲೆ ಅವರಿಗೂ ಅಭಿಮಾನ ಇದೆ. ಅದೃಷ್ಟವಶಾತ್​​ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದಷ್ಟೂ ಬೇಗ ಅವರು ಮತಕ್ಷೇತ್ರಕ್ಕೆ ಅವರು ಬರುತ್ತಾರೆ ಎಂದು ಭಾವುಕರಾಗಿ ನುಡಿದರು.

ಇನ್ನು, ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಶರಣಗೌಡ ಕಂದಕೂರು ಮತ್ತು ಬಿಜೆಪಿ ಅಭ್ಯರ್ಥಿ ಲಲಿತಾ ಅನಪುರ ಅವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ :ರಾಯಚೂರಿನಲ್ಲಿ ಬಿಜೆಪಿ ಸಮಾವೇಶ: ರಾಹುಲ್​ ಗಾಂಧಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ

ಈ ವೇಳೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು, ಬೆಳಿಗ್ಗೆ ಮೈಲಾಪುರ ಮೈಲಾರಲಿಂಗೇಶ್ವರರ ಮತ್ತು ಮಾತಾ ಮಾಣಿಕೇಶ್ವರಿ ದೇವಿಯ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದ್ದೇನೆ. ಜನರ ಪ್ರೀತಿ, ವಿಶ್ವಾಸದಿಂದ ತಂದೆಯ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಪ್ರಚಾರ ಆರಂಭಿಸಲಾಗುವುದು ಎಂದು ತಿಳಿಸಿದರು.

ಕಲಬುರಗಿಯಲ್ಲಿ ಚಿಂಚನಸೂರ್‌ ಕಾರು ಅಪಘಾತ :ಕಳೆದ ಶುಕ್ರವಾರ ರಾತ್ರಿಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಬಾಬುರಾವ್​ ಚಿಂಚನಸೂರ್​ ಅವರ ಕಾರು ಕಲಬುರಗಿ ನಗರದ ಆಕಾಶವಾಣಿ ಕೇಂದ್ರದ ಬಳಿ ಅಪಘಾತಕ್ಕೀಡಾಗಿತ್ತು. ಚಿಂಚನಸೂರು ಅವರ ಮುಖ ಮತ್ತು ಕಾಲಿಗೆ ಗಾಯವಾಗಿತ್ತು. ಕೂಡಲೇ ಅವರನ್ನು ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಾರಿನಲ್ಲಿದ್ದ ಗನ್​ ಮ್ಯಾನ್​​ ಮತ್ತು ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಚಿಂಚನಸೂರ್ ಶುಕ್ರವಾರ ಚುನಾವಣಾ ಪ್ರಚಾರ ಮುಗಿಸಿ ಯಾದಗಿರಿಯಿಂದ ಕಲಬುರಗಿಗೆ ಪ್ರಯಾಣಿಸುತ್ತಿದ್ದರು. ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಆಕಾಶವಾಣಿ ಕೇಂದ್ರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿತ್ತು. ಈ ವೇಳೆ ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿದ್ದು, ಕಾಂಗ್ರೆಸ್​ ಅಭ್ಯರ್ಥಿ ಚಿಂಚನಸೂರು ಅವರನ್ನು ಕಂಡಿದ್ದಾರೆ. ಬಳಿಕ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ:ಜಗದೀಶ್ ಶೆಟ್ಟರ್ ತಬ್ಬಿಕೊಂಡು ಕಣ್ಣೀರು ಸುರಿಸಿದ ಪತ್ನಿ- ವಿಡಿಯೋ

ABOUT THE AUTHOR

...view details