ಸುರಪುರ(ಯಾದಗಿರಿ):ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾದವರಿಗೆ ಕುಡಿಯಲು ನೀರಿನ ವ್ಯವಸ್ಥೆ ಕೂಡಾ ಇಲ್ಲ, ಆದಷ್ಟು ಬೇಗ ನಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಕ್ವಾರಂಟೈನ್ನಲ್ಲಿರುವವರು ಮನವಿ ಮಾಡಿಕೊಂಡಿದ್ದಾರೆ.
ಸೂಕ್ತ ನೀರಿನ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ಕ್ವಾರಂಟೈನ್ನಲ್ಲಿರುವ ಜನರು - ಶೋಷಿತರ ಪರ ಹೋರಾಟದ ಸಂಘಟನೆ
ಸುರಪುರದ ಕಾಲೇಜೊಂದರಲ್ಲಿ ಕ್ವಾರಂಟೈನ್ನಲ್ಲಿರುವ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪಿಸಲಾಗಿದೆ. ಕುಡಿಯಲು ನೀರು ಕೂಡಾ ಇಲ್ಲದೆ ಕಷ್ಟ ಅನುಭವಿಸುತ್ತಿರುವುದಾಗಿ ಕ್ವಾರಂಟೈನ್ನಲ್ಲಿರುವರು ಅಳಲು ತೋಡಿಕೊಂಡಿದ್ದಾರೆ.

ಬೆಳಗ್ಗೆಯಿಂದ ಕುಡಿಯಲು ನೀರು ಇಲ್ಲದೆ ಬಹಳ ಬಾಯಾರಿಕೆ ಆಗುತ್ತಿದೆ. ನಾವೆಲ್ಲರೂ ಸಾಕಷ್ಟು ಮನವಿ ಮಾಡಿದ ಮೇಲೆ ಕೇವಲ ಮೂರು ಬಾಟಲ್ಗಳನ್ನು ತಂದು ಹೊರಗಡೆ ಇಡಲಾಗಿದೆ. ನಮಗೆ ಬೇಕಾದಷ್ಟು ನೀರು ಸಿಗುತ್ತಿಲ್ಲ ಎಂದು ಕ್ವಾರಂಟೈನ್ನಲ್ಲಿರುವವರು ಆರೋಪಿಸಿದ್ಧಾರೆ. ಪರಿಸ್ಥಿತಿ ಸಂಬಂಧ ಮಾಧ್ಯಮದವರೊಂದಿಗೆ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ ಈಗಾಗಲೇ ಎಲ್ಲರೂ ಗುಳೆ ಹೋಗಿ ಮರಳಿ ಬರಲು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಕ್ವಾರಂಟೈನ್ನಲ್ಲಿರಿಸುವವರಿಗೆ ಸರಿಯಾದ ವ್ಯವಸ್ಥೆ ಮಾಡುವುದು ತಾಲೂಕು ಆಡಳಿತದ ಕರ್ತವ್ಯವಾಗಿದೆ. ಎಲ್ಲರಿಗೂ ಸರಿಯಾಗಿ ಊಟ, ತಿಂಡಿ, ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಹೊರಗಿನಿಂದ ಬಂದ ಜನರನ್ನು ಕ್ವಾರಂಟೈನ್ನಲ್ಲಿರಿಸುವುದು ಒಂದು ವೇಳೆ ಅವರಿಗೆ ಸೋಂಕು ಇದ್ದರೆ ಇತರರಿಗೆ ತಗುಲಬಾರದು ಎಂಬ ಉದ್ಧೇಶದಿಂದ. ಆದರೆ ಇಲ್ಲಿ ಕ್ವಾರಂಟೈನ್ನಲ್ಲಿರುವವರು ಒಳಗೆ ಸಾಮಾಜಿಕ ಅಂತರ ಇಲ್ಲದೆ ಗುಂಪು ಗುಂಪಾಗಿ ನಿಂತಿದ್ದಾರೆ. ಕೊರೊನಾ ಬಗ್ಗೆ ಯಾವುದೇ ಜಾಗೃತಿ ಇಲ್ಲದೆ ಇರುವ ಈ ಜನರನ್ನು ತಾಲೂಕು ಆಡಳಿತ ಎಚ್ಚರಿಸಬೇಕಿದೆ.