ಯಾದಗಿರಿ:ಕಲುಷಿತ ನೀರು ಸೇವನೆಯಿಂದ 10ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಮಾರಲಭಾವಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದಲ್ಲಿ ವೃದ್ಧ ಸೇರಿದಂತೆ ಒಟ್ಟು 10 ಜನರಲ್ಲಿ ವಾಂತಿ, ಭೇದಿ ಕಾಸಿಕೊಂಡಿದೆ. ಸಚಿನ್ (14), ಮಂದಮ್ಮ (28), ನಂದಿನಿ (16), ಭಾಗ್ಯಶ್ರೀ (28), ಪ್ರಮೋಥಗೌಡ (8), ಪ್ರಥಮ ಕರಿಗೌಡ (5), ಅನಿರುತ್ ಅಡಗಲ್ (5), ಪ್ರತಿಭಾ ಮೇಟಿ (3) ವಿಠೋಭಾ ಸುಭೇದಾರ (70), ಹುಲಗಪ್ಪ ಕರಿಗೌಡ್ರ(55) ಅಸ್ವಸ್ಥಗೊಂಡಿದ್ದಾರೆ. ಇದರಲ್ಲಿ ನಾಲ್ವರು ಮಕ್ಕಳಿಗೆ ಹುಣಸಗಿ ಹಾಗೂ ತಾಳಿಕೋಟಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಗ್ರಾಮದಲ್ಲಿರುವ ಆರೋಗ್ಯ ಕ್ಯಾಂಪ್‌ಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಇವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಾಜಾ ವೆಂಕಟಪ್ಪ ನಾಯಕ ತಿಳಿಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಇದೇ ಗ್ರಾಮದ ತಿಪ್ಪವ್ವ ಕುಚಬಾಳ (50) ಮೃತಪಟ್ಟಿದ್ದಳು. ವಾಂತಿ, ಭೇದಿಯಿಂದ ಬಳಲುತ್ತಿದ್ದಳು ಎನ್ನಲಾದ ಈಕೆಯನ್ನು ಕುಟುಂಬಸ್ಥರು ಹುಣಸಗಿ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಸಮೀಪದ ತಾಳಿಕೋಟಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ತಿಪ್ಪವ್ವ ಮೃತಪಟ್ಟಿದ್ದರು. ಕಲುಷಿತ ನೀರು ಸೇವನೆ ಮಾಡಿರುವುದರಿಂದ ತಿಪ್ಪವ್ವ ಮೃತಪಟ್ಟಿದ್ದಾರೆ ಎಂದು ಸಹೋದರ ಮುದೆಪ್ಪ ಮೇಟಿ ಆರೋಪಿಸಿದರು.