ಯಾದಗಿರಿ : ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಉಡುಪಿ ಜಿಲ್ಲೆಯ ಬ್ರಹ್ಮಾವರದ ಚೇರ್ಕಾಡಿ ಗ್ರಾಮದ ಯುವಕನೋರ್ವ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಹರ್ಷೇಂದ್ರ ಆಚಾರ್ಯ(23) ಎಂಬ ಯುವಕ ಸೈಕಲ್ ಮೂಲಕ ಕೇರಳದಿಂದ ಸಿಂಗಪುರಕ್ಕೆ ಸುಮಾರು 11,000 ಕಿಲೋಮೀಟರ್ ಯಾತ್ರೆ ಕೈಗೊಂಡಿದ್ದಾರೆ.
11000 ಕಿಲೋಮೀಟರ್ ಯಾತ್ರೆ :ಬ್ರಹ್ಮಾವರದಲ್ಲಿ ಪ್ರೌಢಶಿಕ್ಷಣ ಮತ್ತು ನಿಟ್ಟೆಯಲ್ಲಿ ಡಿಪ್ಲೊಮೋ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಇವರು ಶಿವರಾಮ ಕಾರಂತರ (ಕೋಶಿಕಾ)ನಾಟಕ ತಂಡದ ಕಲಾವಿದನಾಗಿದ್ದಾರೆ. ಜೊತೆಗೆ ಉಳಿದವರು ಕಂಡಂತೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ತಾಲ್ಲೂಕಿನ ಯರಗೋಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಹಾದು ಹೋಗುವಾಗ ಮಾತನಾಡಿದ ಅವರು, ರಜೆ ದಿನಗಳಲ್ಲಿ ಲ್ಯಾಂಬ್ರಟ್ ಸ್ಕೂಟರ್ ಮತ್ತು ಜಾವ ಬೈಕ್ ನಲ್ಲಿ ದಕ್ಷಿಣಕನ್ನಡದ ಚಾರಣ ಪ್ರದೇಶಗಳನ್ನು ಸುತ್ತಿದ್ದೇನೆ. ಅಕ್ಟೋಬರ್ 2021ರಲ್ಲಿ 2700 ಕಿಲೋಮೀಟರ್ ಕಾಲು ನಡಿಗೆಯಲ್ಲಿ 'ಕರ್ನಾಟಕದಿಂದ ಕಾಶ್ಮೀರಕ್ಕೆ' ಹೋಗಿ 'ಹುಲಿಕುಣಿತ' ಪ್ರದರ್ಶಿಸಿದ್ದೇವೆ. ಆಗಸ್ಟ್ 15 ರಂದು ಕೇರಳದಿಂದ ಸಿಂಗಪುರಕ್ಕೆ ಸೈಕಲ್ ಯಾತ್ರೆ ಕೈಗೊಂಡಿದ್ದು, ಉಡುಪಿ ಶಾಸಕ ಕೆ. ರಘುಪತಿ ಭಟ್ ರಾಷ್ಟ್ರಧ್ವಜ ನೀಡಿ ಶುಭ ಹಾರೈಸಿದ್ದಾರೆ ಎಂದು ಹೇಳಿದರು.