ಯಾದಗಿರಿ :ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಮೂಡಬುಳ ಗ್ರಾಮದಲ್ಲಿ ನಡೆದಿದೆ. ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದ ಭೀಮಾಶಂಕರ ಮರೆಪ್ಪ ಚೆನ್ನೂರ(20) ಹಾಗೂ 17 ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಿಎ ವಿದ್ಯಾರ್ಥಿಯಾಗಿದ್ದ ಭೀಮಾಶಂಕರ ಹಾಗೂ ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿದ್ದ ಬಾಲಕಿ ಇಬ್ಬರು ಬಸ್ಸಿನಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು. ಅಪ್ರಾಪ್ತರಾಗಿದ್ದಾರೆ ಎಂಬ ಕಾರಣಕ್ಕೆ ಮದುವೆ ಬೇಡ ಎಂದು ಎರಡು ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಮನನೊಂದು ಗ್ರಾಮದ ಗ್ರಾಮ ಪಂಚಾಯ್ತಿಯ ಹಿಂದುಗಡೆ ಇಬ್ಬರು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಭೀಮರಾಯನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರೀತಿಸಿ ಮದುವೆಯಾಗಿ 5 ತಿಂಗಳಲ್ಲೇ ಪ್ರೇಮಿಗಳ ಬದುಕು ಅಂತ್ಯ:ಪ್ರೀತಿಸಿ ವಿವಾಹವಾದ ಜೋಡಿ ಸಾವಿನಲ್ಲೂ ಒಂದಾದ ದುರಂತ ಘಟನೆ ಮೈಸೂರಿನಲ್ಲಿ (ನವೆಂಬರ್ 6-2022)ರಲ್ಲಿ ನಡೆದಿತ್ತು. ಶಿವಕುಮಾರ್ (29) ಹಾಗೂ ಕವಿತಾ (25) ಸಾವಿನಲ್ಲೂ ಒಂದಾದ ದಂಪತಿ ಎಂದು ತಿಳಿದುಬಂದಿತ್ತು.
ಶಾದನಹಳ್ಳಿ ಗ್ರಾಮದ ನಿವಾಸಿಗಳಾದ ಪ್ರೇಮಿಗಳಿಬ್ಬರು 5 ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ನಂತರ ಶ್ರೀರಂಗಪಟ್ಟಣ ಮೊಗರಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ಶನಿವಾರ ಕೆ. ಆರ್. ಎಸ್ ಬಳಿಯ ವರುಣಾ ಕಾಲುವೆ ಕಟ್ಟೆ ಮೇಲೆ ಕುಳಿತು ಬಟ್ಟೆ ಒಗೆಯುತ್ತಿದ್ದ ಕವಿತಾ ಆಕಸ್ಮಿಕವಾಗಿ ನೀರಿಗೆ ಜಾರಿ ಬಿದ್ದಿದ್ದರು. ಪತ್ನಿಯನ್ನು ರಕ್ಷಿಸಲು ಪತಿ ಶಿವಕುಮಾರ್ ಸಹ ನೀರಿಗೆ ಹಾರಿದ್ದರು. ಆದರೆ ಇಬ್ಬರೂ ಸಹ ನೀರಿನಿಂದ ಮೇಲೆ ಬಂದಿಲ್ಲ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾಮನಕೆರೆಹುಂಡಿ ಬಳಿಯ ವರುಣಾ ಚಾನೆಲ್ನಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿತ್ತು.
ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ: ನಾಲೆಯ ಬಳಿ ಬಟ್ಟೆ ಒಗೆಯುತ್ತಿರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದ ಪತ್ನಿಯನ್ನು ರಕ್ಷಿಸಲು ನಾಲೆಗೆ ಹಾರಿದ ಪತಿಯೂ ಸಹ ನೀರು ಪಾಲಾಗಿದ್ದ. ಪ್ರೀತಿಸಿ ವಿವಾಹವಾಗಿ ಒಟ್ಟಿಗೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ ಸಾವಿನಲ್ಲೂ ಸಹ ಒಂದಾಗಿದ್ದರು. ದಂಪತಿಯ ಸಾವಿನ ಕುರಿತಾಗಿ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯುವ ಪ್ರೇಮಿಗಳಿಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ:ಇನ್ನೊಂದೆಡೆ ಯುವ ಪ್ರೇಮಿಗಳು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕಮಲಾಪುರ್ ತಾಲೂಕಿನ ಡೊಂಗರಗಾಂವ್ ಗ್ರಾಮದಲ್ಲಿ(ಮೇ 8-2023)ರಂದು ನಡೆದಿತ್ತು. ಮೃತರನ್ನು ಅಕ್ಷತಾ ಭರಣಿ (19) ಹಾಗೂ ಪಾಂಡುರಂಗ್ ಕಿಣ್ಣಿ(20) ಎಂದು ಗುರುತಿಸಲಾಗಿತ್ತು. ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿದ್ದವು. ಯುವ ಪ್ರೇಮಿಗಳ ಸಾವಿಗೆ ಕಾರಣ ತಿಳಿದುಬಂದಿರಲಿಲ್ಲ. ಮೇಲ್ನೋಟಕ್ಕೆ ಕುಟುಂಬಸ್ಥರ ವಿರೋಧದಿಂದ ಸಾವಿಗೆ ಶರಣಾಗಿರಬಹುದೆಂದು ಪೊಲೀಸರು ಶಂಕಿಸಿದ್ದರು.
ಇದನ್ನೂ ಓದಿ:ಕಲಬುರಗಿ: ಯುವ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ