ಯಾದಗಿರಿ :ನಗರದಲ್ಲಿರುವ ಟಿಪ್ಪು ಸುಲ್ತಾನ್ ವೃತ್ತಕ್ಕೆ ವೀರ ಸಾವರ್ಕರ್ ವೃತ್ತವೆಂದು ಮರುನಾಮಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪರ-ವಿರೋಧಗಳು ವ್ಯಕ್ತವಾಗಿದೆ. ಟಿಪ್ಪು ವೃತ್ತವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಶಿವಾಜಿ ಸೇನೆಯ ರಾಜ್ಯಾಧ್ಯಕ್ಷ ಪರಶುರಾಮ ಶೇಗುರ್ಕರ್ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದಾಗ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಹತ್ತಿಕುಣಿ ಕ್ರಾಸ್ನಲ್ಲಿರುವ ಟಿಪ್ಪು ವೃತ್ತಕ್ಕೆ ಈಗಾಗಲೇ ನಗರಸಭೆಯಿಂದ ವೀರ ಸಾವರ್ಕರ್ ಹೆಸರಿಡಲು ಅನುಮೋದನೆ ನೀಡಲಾಗಿದೆ. ಇದಕ್ಕೆ ಟಿಪ್ಪು ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಪ್ರಾಣ ಬೇಕಾದರೆ ಬಿಡ್ತೀವಿ. ಆದರೆ, ಸರ್ಕಲ್ ತೆರವು ಮಾಡಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹತ್ತಿಕುಣಿ ಕ್ರಾಸ್ ಬಳಿಯಿರುವ ಟಿಪ್ಪು ಸರ್ಕಲ್‌ನಲ್ಲಿ ಯಾವುದೇ ಪ್ರತಿಭಟನೆ ನಡೆಸಬಾರದು, ಶಾಂತಿ ಕದಡುವ ಪ್ರಯತ್ನ ಮಾಡಬಾರದು ಎಂದು ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಿ ಸಹಾಯಕ ಆಯುಕ್ತರಾದ ಶಾ ಆಲಂ ಹುಸೇನ್ ಆದೇಶ ಹೊರಡಿಸಿದ್ದಾರೆ.
ಟಿಪ್ಪು ಸರ್ಕಲ್ ತೆರವು ಮಾಡುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಜೈ ಶಿವಾಜಿ ಸೇನೆ ರಾಜ್ಯಾಧ್ಯಕ್ಷ ಪರಶುರಾಮ್ ಶೇಗುರ್ಕರ್ ವಿರುದ್ಧ ಯಾದಗಿರಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಗೂ ಟಿಪ್ಪು ಸಂಘಟನೆಯ ಅಬ್ದುಲ್ ಕರೀಂ ವಿರುದ್ಧವೂ ದೂರು ದಾಖಲಾಗಿದೆ. ಅಬ್ದುಲ್ ಕರೀಂ ಭಾನುವಾರದಿಂದ ಜಿಲ್ಲೆಯಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ನಿಷೇಧಾಜ್ಞೆ ಜಾರಿ ನಡುವೆಯೂ ನಗರದ ಗಾಂಧಿ ಸರ್ಕಲ್ ಬಳಿ ಪ್ರತಿಭಟನೆಗೆ ಮುಂದಾಗಿದ್ದ ಪರಶುರಾಮ್ ಶೇಗುರ್ಕರ್ ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.