ಯಾದಗಿರಿ: 'ನಾನು ತುಂಬು ಗರ್ಭಿಣಿ ಅದೇನ್ರಿ ಸರ್, ಆಸ್ಪತ್ರೆಗೆ ಹೋಗಾಕ್ ದುಡ್ಡಿಲ್ಲ. ಇದ್ದ ಹಣವೆಲ್ಲಾ ನೀರಿನಲ್ಲಿ ಕೊಚ್ಚಿ ಹೋಗೈತಿ. ಈಗ ನಾನು ಏನ್ ಮಾಡ್ಬೇಕು? ನನಗ್ಯಾರು ದಿಕ್ಕು?' ಹೀಗೆ ಪ್ರವಾಹದ ಭೀಕರತೆಯನ್ನು ತೆರೆದಿಟ್ಟ ತುಂಬು ಗರ್ಭಿಣಿ ಕವಿತಾರ ಕಣ್ಣೀರಿನ ಕಥೆ ಎಂತ ಕಲ್ಲು ಹೃದಯದವರನ್ನು ಕರಗಿಸುವಂತಿದೆ.
ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಿದ ಹಿನ್ನೆಲೆ ಗೆದ್ದಲಮರಿ ತಾಂಡ ಜಲದಿಗ್ಭಂಧನಕ್ಕೆ ಒಳಗಾಗಿತ್ತು. ತಾಂಡದ ಜನರನ್ನು ಸ್ಥಳಾಂತರಿಸಲಾಗಿತ್ತಾದರೂ, ಮನೆಗಳು-ಗುಡಿಸಲುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಇದರಲ್ಲಿ ಗರ್ಭಿಣಿ ಕವಿತಾ ಸಹ ಸೂರು ಕಳೆದುಕೊಂಡಿದ್ದಾರೆ.