ಯಾದಗಿರಿ :ರಾತ್ರೋರಾತ್ರಿ ಕಳ್ಳತನವಾಗಿದ್ದ ಜೋಡೆತ್ತು ಕಳ್ಳರಿಂದ ತಪ್ಪಿಸಿಕೊಂಡು ಅನ್ನದಾತನನ್ನೇ ಅರಸಿ ಬಂದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸಗರ ಗ್ರಾಮದ ರೈತ ತಿರುಪತಿ ಎಂಬವರಿಗೆ ಸೇರಿದ ಜೋಡೆತ್ತುಗಳನ್ನು ಕಳ್ಳರು ತಡರಾತ್ರಿ ಕಳ್ಳತನ ಮಾಡಿದ್ದರು. ಬೆಳಗಿನ ಜಾವ 4 ಗಂಟೆಗೆ ಕೊಟ್ಟಿಗೆ ನೋಡಿದ ರೈತ ತನ್ನ ಎತ್ತುಗಳು ಕಾಣದೆ ಗೋಳಾಡಿದ್ದರು. ಬದುಕಿನ ಬೆನ್ನೆಲುಬಾದ ಎತ್ತುಗಳೇ ಇಲ್ಲದಕ್ಕೆ ಕಂಗಾಲಾಗಿ ಕಣ್ಣೀರಿಟ್ಟಿದ್ದರು. 1.5 ಲಕ್ಷ ರೂಪಾಯಿ ಬೆಲೆಬಾಳುವ ಎತ್ತುಗಳು ಕಳುವಾದವಲ್ಲ ಎಂದು ರೋಧಿಸಿದ್ದರು.
ಗ್ರಾಮಸ್ಥರು ಕಳೆದುಹೋದ ಎತ್ತುಗಳನ್ನು ಹುಡುಕೋಣ ಎಂದು ರೈತ ತಿರುಪತಿಗೆ ಧೈರ್ಯ ತುಂಬಿದ್ದರು. ಕಣ್ಣೀರು ಹಾಕುತ್ತಾ ಎತ್ತುಗಳಿಗಾಗಿ ತಿರುಪತಿ ಕಾಯುತ್ತಾ ಕುಳಿತಿದ್ದರು. ಆದರೆ, ಅದೇನಾಯ್ತೋ ಗೊತ್ತಿಲ್ಲ. ಎತ್ತುಗಳು ಕಳ್ಳರಿಂದ ತಪ್ಪಿಸಿಕೊಂಡು ಸಗರ ಗ್ರಾಮದಲ್ಲಿರುವ ತನ್ನ ಮಾಲೀಕನ ಮನೆಸೇರಿವೆ. ಎತ್ತು ಕಾಣದೆ ಬೇಸರಿಸುತ್ತಾ ಕುಳಿತ ರೈತನಿಗೆ ಎತ್ತುಗಳನ್ನು ನೋಡುತ್ತಿದ್ದಂತೆ ಸಂತೋಷವಾಗಿದೆ. ರೈತ ತಿರುಪತಿ ಮರಳಿ ಬಂದ ಎತ್ತುಗಳ ಮೈಸವರಿ ಪ್ರೀತಿ ತೋರಿದ್ದಾರೆ.
''ರಾತ್ರೋರಾತ್ರಿ ಎತ್ತುಗಳು ಕಳ್ಳತನವಾಗಿದ್ದವು. ಅವುಗಳ ಕೊರಳೊಳಗಿನ ಜಂಗು, ಬಾರು ಕೊಯ್ದು ಕಳ್ಳರು ಎತ್ತುಗಳನ್ನು ವಾಹನದಲ್ಲಿ ಕದ್ದೊಯ್ದಿದ್ದರು. ರಾತ್ರಿ ನೋಡಿದಾಗ ಇರಲಿಲ್ಲ. ಬೆಳಗಿನ ಜಾವ 4 ಗಂಟೆಗೆ ಎದ್ದು ನೋಡಿದರೆ ಮರಳಿ ಮನೆಗೆ ಬಂದಿವೆ'' ಎಂದು ತಿರುಪತಿ ಹೇಳಿದರು.