ಯಾದಗಿರಿ:ಎಡೆಬಿಡದೆ ಸುರಿದ ಮಳೆ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದರೆ, ಮತ್ತೊಂದೆಡೆ ಪಕೃತಿ ಸೌಂದರ್ಯ ಹೆಚ್ಚಿ ಜನರಿಗೆ ಸಂತಸದ ವಾತಾವರಣ ಸೃಷ್ಟಿಸಿದೆ.
ಈ ಬಾರಿ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿಯೇ ಇದ್ದು, ಶಹಾಪುರ ತಾಲೂಕು ರಾಜ್ಯದಲ್ಲೇ ಹೆಚ್ಚು ಮಳೆ ಬಿದ್ದ ಪ್ರದೇಶವಾಗಿದೆ. ಹೌದು, ಯಾದಗಿರಿ ಜಿಲ್ಲೆಯಲ್ಲಿ ಈ ವರ್ಷ ಸುರಿದ ಮಳೆ ದಾಖಲೆ ನಿರ್ಮಿಸಿದೆ. ನಿರಂತವಾಗಿ ಸುರಿದ ಮಹಾ ಮಳೆಗೆ ಜಿಲ್ಲೆಯ ರೈತರ ಬೆಳೆ ಸಂಪೂರ್ಣ ನಾಶವಾಗಿವೆ. ಹತ್ತಿ ಹಾಗೂ ಭತ್ತದ ಜಮೀನುಗಳು ಕರೆಯಂತಾಗಿ ಪರಿವರ್ತನೆಯಾಗಿವೆ. ಆದ್ರೆ ಇದೇ ಮಳೆ ಶಹಾಪುರ ತಾಲೂಕಿನ ಪ್ರಕೃತಿ ಪ್ರಿಯರಿಗೆ ಆನಂದ ನೀಡಿದೆ.
ಶಹಾಪುರ ನಗರದ ಸಗರಾದ್ರಿ ಬೆಟ್ಟದಲ್ಲಿ ಬರುವ ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯೆ ಬೆಟ್ಟದ ಮಧ್ಯದಿಂದ ಝುಳು ಝುಳು ನೀರು ಹರಿದು ಬರುತ್ತಿದೆ. ಕಳೆದ ಹತ್ತಾರು ವರ್ಷಗಳಿಂದ ಮಳೆ ನೀರು ಇಲ್ಲದೆ ಬತ್ತಿ ಹೋಗಿದ್ದ ಈ ಪ್ರದೇಶವೀಗ ಪ್ರವಾಸಿಗರ ಪಾಲಿಗೆ ಹಾಟ್ ಸ್ಪಾಟ್ ಆಗಿದೆ. ಹೀಗಾಗಿ ಶಹಾಪುರ ನಗರದ ಜನ ಮಳೆ ನಿಂತು ಹೋದ ಮೇಲೆ ಈ ಸ್ಥಳವನ್ನ ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ.
ಬಂಡೆಗಲ್ಲುಗಳ ನಡುವೆ ಬಿಳಿನೊರೆ ಹಾಲಿನಂತೆ ಉಕ್ಕಿ ಹರಿಯುವ ಈ ತಾಣಕ್ಕೆ ದಬೆದಭೆ ಫಾಲ್ಸ್ ಎಂದು ಕರೆಯುತ್ತಾರೆ. ಜೋರಾಗಿ ಮಳೆ ಬಂದರೆ ದಬದಭೆ ಫಾಲ್ಸ್ ಸಣ್ಣ ಜೋಗದಂತೆ ಆಗುತ್ತದೆ. ಹೀಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಕೊರೊನಾ ಕಾಲದಲ್ಲಿ ಶಾಲೆಗಳಿಗೆ ರಜೆ ಇರುವ ಕಾರಣಕ್ಕೆ ನೂರಾರು ಮಂದಿ ತಮ್ಮ ಕುಟುಂಬ ಸಮೇತರಾಗಿ ಬಂದು ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆದಿದ್ದಾರೆ. ಇಂತಹ ಅಪರೂಪದ ಸ್ಥಳಗಳು ನಮ್ಮ ಭಾಗದಲ್ಲಿ ಸಿಗುವುದು ತೀರಾ ಕಡಿಮೆ. ಪ್ರಕೃತಿ ವಿಸ್ಮಯವಾಗಿರುವ ಇಂತಹ ಸ್ಥಳಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂರಕ್ಷಿಸಿ ಉತ್ತೇಜನ ನೀಡಬೇಕು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆ ಜಿಲ್ಲೆಯ ರೈತರಿಗೆ ಗಾಯದ ಮೇಲೆ ಬರೆ ಎಳೆದರೆ, ಪ್ರಕೃತಿ ಪ್ರಿಯರಿಗೆ ಆನಂದ ನೀಡಿದೆ.