ಟಂಟಂ-ಲಾರಿ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಐವರ ಸಾವು - ಘೋರ ಅಪಘಾತ 2021
11:50 April 21
ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರ ದುರ್ಮರಣ
ಯಾದಗಿರಿ :ಟಂ ಟಂ ಆಟೋ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ಐವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಕೊಲ್ಲೂರು ಎಂ ಗ್ರಾಮದ ಬಳಿ ನಡೆದಿದೆ.
ಅಯ್ಯಮ್ಮ (40), ಶರಣಮ್ಮ (40), ಕಾಸಿಂಬೀ (40), ಭೀಮಬಾಯಿ (40), ದೇವೆಂದ್ರಮ್ಮ (70) ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ. ಮೃತರೆಲ್ಲರೂ ವಡಗೇರಾ ತಾಲೂಕಿನ ಮುನಮುಟಗಿ ಗ್ರಾಮದವರಾಗಿದ್ದು ಗಾಯಾಳುಗಳನ್ನ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಾರ್ಮಿಕರು ಮುನಮುಟಗಿ ಗ್ರಾಮದಿಂದ ದೇವದುರ್ಗದ ಕಡೆ ಕೂಲಿ ಕೆಲಸಕ್ಕಾಗಿ ಟಂಟಂನಲ್ಲಿ ತೆರಳುತ್ತಿದ್ದ ವೇಳೆ ಈ ಘೋರ ದುರಂತ ಸಂಭವಿಸಿದೆ. ಇನ್ನು ಸ್ಥಳಕ್ಕೆ ಆಗಮಿಸಿದ ಶಹಾಪುರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.