ಸುರಪುರ:ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೂತನ ಅಧ್ಯಕ್ಷರಾಗಿ ಸುರಪುರ ಶಾಸಕ ನರಸಿಂಹ ನಾಯಕ ರಾಜುಗೌಡ ಅಧಿಕಾರ ಸ್ವೀಕರಿಸಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ದೊಡ್ಡ ಮಟ್ಟದಲ್ಲಿ ಹರಡುತ್ತಿದ್ದು, ಇದರ ನಡುವೆಯೇ ಶಾಸಕರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ತಾಲೂಕಿನಿಂದ ಸುಮಾರು 50ಕ್ಕೂ ಹೆಚ್ಚು ಮುಖಂಡರು ಸಮಾರಂಭದಲ್ಲಿ ಭಾಗವಹಿಸಿ ರಾಜುಗೌಡರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜುಗೌಡ, ತಾವೆಲ್ಲ ನನ್ನ ಮೇಲೆ ಅಭಿಮಾನವಿಟ್ಟು ಇಂತಹ ಸಂದರ್ಭದಲ್ಲೂ ಬಂದು ಶುಭ ಹಾರೈಸುತ್ತಿರುವುದು ಸಂತಸ ತಂದಿದೆ. ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಮೇಲೆ ಭರವಸೆಯಿಟ್ಟು ನೀಡಿರುವ ಈ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ರಮೇಶ ಜಾರಕಿಹೊಳಿ, ಭೈರತಿ ಬಸವರಾಜ, ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ, ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಮುಖಂಡರಾದ ಸಂಗನಗೌಡ ವಜ್ಜಲ್, ಹೆಚ್.ಸಿ.ಪಾಟೀಲ್ ಶಂಕರ್ ನಾಯಕ, ಬಲಭೀಮ ನಾಯಕ ಬೈರಿಮಡ್ಡಿ, ಶರಣು ನಾಯಕ ಬೈರಿಮಡ್ಡಿ ಯಲ್ಲಪ್ಪ, ಕುರಕುಂದಿ ಸುರೇಶ್, ಸಜ್ಜನ್ ಶ್ರೀನಿವಾಸ ನಾಯಕ, ದರಬಾರಿ ಮೇಲಪ್ಪ, ಗುಳಗಿ ಮಲ್ಲಿಕಾರ್ಜುನ ರೆಡ್ಡಿ, ಕೃಷ್ಣಾರೆಡ್ಡಿ ಮುದನೂರು, ಮಂಜುನಾಥ ನಾಯಕ ಇತರರು ಶಾಸಕ ರಾಜುಗೌಡರನ್ನು ಸನ್ಮಾನಿಸಿ ಗೌರವಿಸಿದರು.