ಸುರಪುರ: ಯಾದಗಿರಿ ಜಿಲ್ಲೆಯಾದ್ಯಂತ ಕೊರೊನಾ ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆ, ಜಿಲ್ಲೆಯಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಆದರೆ ಸುರಪುರ ನಗರದಲ್ಲಿ ಮಾತ್ರ ಲಾಕ್‌ಡೌನ್‌ಗೆ ಸಾರ್ವಜನಿಕರು ಸಹಕರಿಸುತ್ತಿಲ್ಲ.
ಲಾಕ್‌ಡೌನ್‌ಗೆ ಸಹಕಾರ ನೀಡದ ಸುರಪುರ ಜನತೆ: ಪೊಲೀಸರ ಕಣ್ತಪ್ಪಿಸಿ ಓಡಾಟ - Surapur people not cooperating with lockdown
ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಲಾಕ್‌ಡೌನ್ ವಿಧಿಸಿದ್ದು, ಯಾದಗಿರಿಯ ಸುರಪುರದಲ್ಲಿಯೂ ಸಹ ಲಾಕ್‌ಡೌನ್ ಜಾರಿಯಾಗಿದೆ. ಆದರೆ ಸಾರ್ವಜನಿಕರು ಮಾತ್ರ ಲಾಕ್‌ಡೌನ್ ಬಗ್ಗೆ ತಲೆಕೆಡಿಸಿಕೊಳ್ಳದೆ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.
ಸುರಪುರ ನಗರದಲ್ಲಿ ಅಗತ್ಯ ಸೇವೆಗಳಾದ ದಿನಸಿ, ಹಾಲು, ತರಕಾರಿ, ಹಣ್ಣು, ಮೆಡಿಕಲ್ ಮತ್ತು ಆಸ್ಪತ್ರೆಗೆ ಮಾತ್ರ ಅವಕಾಶ ನೀಡಲಾಗಿದೆ. ಬೆಳಿಗ್ಗೆ 5 ಗಂಟೆಯಿಂದ 12 ಗಂಟೆ ವರೆಗೆ ಮಾತ್ರ ಸಮಯಾವಕಾಶ ನೀಡಿದ್ದು, ಈ ಸಂದರ್ಭದಲ್ಲಿ ಜನರು ತಮಗೆ ಬೇಕಾದ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ ನಗರದ ಜನತೆ ಲಾಕ್‌ಡೌನ್‌ಗೆ ಸಹಕಾರ ನೀಡದೆ, ಯಾವ ಭಯವೂ ಇಲ್ಲದೆ ಓಡಾಡುತ್ತಿದ್ದಾರೆ. ಪೊಲೀಸರು ಎಲ್ಲೆಡೆ ಸಂಚರಿಸುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಹಾಗೂ ಅನಾವಶ್ಯಕವಾಗಿ ಹೊರಗೆ ಬಂದವರ ಬೈಕ್‌ಗಳ ಹಿಡಿದು ದಂಡ ವಿಧಿಸುತ್ತಿದ್ದಾರೆ. ಇಷ್ಟಿದ್ದರೂ ಸಹ ಜನರು ಭೀತಿಯಿಲ್ಲದೆ ಓಡಾಡುತ್ತಿದ್ದಾರೆ.
ಮೊದಲ ದಿನದ ಲಾಕ್‌ಡೌನ್ ಹೀಗಾದರೆ, ಮುಂದಿನ ದಿನಗಳು ಹೇಗಿರಲಿವೆ ಅಲ್ಲದೆ ಇದರಿಂದ ಕೊರೊನಾ ವೈರಸ್ ನಿರ್ಮೂಲನೆ ಹೇಗೆ ಸಾಧ್ಯ ಎಂದು ಸಾರ್ವಜನಿಕರು ಮಾತನಾಡುವಂತಾಗಿದೆ.