ಯಾದಗಿರಿ: ರಾಜ್ಯದಲ್ಲಿ ಸದ್ಯ ಎದ್ದಿರುವ ಡ್ರಗ್ಸ್ ಬಿರುಗಾಳಿಯ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಸಿಎಂ ಬದಲಾವಣೆ ಸುದ್ದಿ ಕೂಡ ಬಹಳ ಸದ್ದು ಮಾಡುತ್ತಿದೆ. ಬಿಜೆಪಿ ಪ್ರಮುಖ ಶಾಸಕರು ಕೂಡ ಸೂಕ್ತ ಸ್ಥಾನಮಾನಕ್ಕಾಗಿ ತೆರೆಮೆರೆಯಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಹ ಇದೆ. ರಾಜ್ಯ ರಾಜಕಾರಣದಲ್ಲಿ ಡಿಸಿಎಂ ಹುದ್ದೆಗಾಗಿ ಒಂದೇ ಸಮುದಾಯದ ಇಬ್ಬರು ನಾಯಕರ ನಡುವೆ ನಡೆಯುತ್ತಿರುವ ಪೈಪೋಟಿ ಇದರ ಹೊರತಾಗಿಲ್ಲ..! ಆರೋಗ್ಯ ಸಚಿವ ಬಿ.ಶ್ರೀರಾಮುಲು ಡಿಸಿಎಂ ಸ್ಥಾನವನ್ನು ತಮ್ಮದಾಗಿಸಿಕೊಳ್ಳಲು ದೇವರ ಮೊರೆ ಹೋಗಿದ್ದು, ಇದೀಗ ಕುತೂಹಲಕ್ಕೆ ತಂದಿಟ್ಟಿದೆ.
ಡಿಸಿಎಂ ಸ್ಥಾನಕ್ಕಾಗಿ ದೇವರ ಮೊರೆ ಹೋದ ಸಚಿವ ಶ್ರೀರಾಮುಲು ಹೌದು, ಕಲ್ಯಾಣ ಕರ್ನಾಟಕ ಉತ್ಸವ ಹಿನ್ನೆಲೆ ಯಾದಗಿರಿಗೆ ಆಗಮಿಸಿದ್ದ ಆರೋಗ್ಯ ಸಚಿವ ಶ್ರೀರಾಮುಲು, ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಳದಲ್ಲಿರುವ ಗಡೇ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಲ್ಲದೇ ಉಪಮುಖ್ಯಮಂತ್ರಿ ಸ್ಥಾನ ನೀಡು ತಾಯಿ ಎಂದು ದೇವಿಗೆ ಇಂಗ್ಲಿಷ್ನಲ್ಲಿ ಪತ್ರವೊಂದನ್ನು ಬರೆಯುವ ಮೂಲಕ ಮನಸ್ಸಿನೊಳಗಿನ ಆಸೆಯನ್ನು ಹೊರಹಾಕಿದ್ದಾರೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೂಡ ಈ ಹಿಂದೆ ದೇವಿಯನ್ನು ಭೇಟಿಯಾಗಿ ಸಂಕಷ್ಟ ದೂರವಾಗುವಂತೆ ಮೊರೆ ಇಟ್ಟಿದ್ದರು. ದೇವಿ ಕೃಪೆಯಿಂದ ಡಿಕೆಶಿಗೆ ಕೆಪಿಸಿಸಿ ಪಟ್ಟ ಸಿಕ್ಕಿತ್ತು ಎನ್ನುವ ಮಾತಿದೆ. ಡಿಕೆಶಿ ನಂತರ ಈಗ ಶ್ರೀರಾಮಲು ದೇವಿಯ ಮೊರೆ ಹೋಗಿದ್ದಾರೆ. ದೇವಸ್ಥಾನದ ಪೂಜಾರಿ ಮರಿಸ್ವಾಮಿ ಅವರಿಂದ ದೇವಿಗೆ ಅರ್ಚನೆ ಮಾಡಿಸಿದ್ದಾರೆ. ದೇವಿ ಮೊರೆ ಹೋಗಿರುವ ಸಚಿವ ಶ್ರೀರಾಮುಲು, ಡಿಸಿಎಂ ಸ್ಥಾನ ನೀಡು ಎಂದು ಇಂಗ್ಲಿಷ್ನಲ್ಲಿ ಪತ್ರ ಬರೆದಿದ್ದಾರಂತೆ.
ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದ ಶ್ರೀರಾಮುಲು, ದೇವಿಯ ದರ್ಶನಕ್ಕೆಂದು ಒಂದು ದಿನ ಮುಂಚೆಯೇ ಜಿಲ್ಲೆಗೆ ಬಂದಿದ್ದಾರೆ. ನೇರವಾಗಿ ಗೋನಾಲಕ್ಕೆ ತೆರಳಿ ಗಡೇ ದುರ್ಗಾದೇವಿ ದರ್ಶನ ಪಡೆದಿದ್ದಾರೆ. ಬಳಿಕ ದೇವಸ್ಥಾನದ ಪೂಜಾರಿ ಮರಿಸ್ವಾಮಿ ಅವರ ಮಾರ್ಗದರ್ಶನದಂತೆ, ದೇವಿಯ ಗರ್ಭಗುಡಿಯೊಳಗೆ ತೆರಳಿ ತಮ್ಮ ಪತ್ರವನ್ನು ದೇವಿಯ ಪಾದದ ಬಳಿ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೂ ಮುಂಚೆ ದೇವಸ್ಥಾನದ ಅರ್ಚಕ ಮರಿಸ್ವಾಮಿಯವರನ್ನು ತಮ್ಮ ನಿವಾಸಕ್ಕೆ ಕರೆಸಿ ಒಂದು ಹಂತದ ಮಾತುಕತೆ ನಡೆಸಿದ ಬಳಿಕ ದೇವಸ್ಥಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಡಿಸಿಎಂ ಸ್ಥಾನಕ್ಕಾಗಿ ದೇವರ ಮೊರೆ ಹೋದ ಸಚಿವ ಶ್ರೀರಾಮುಲು ಗಡೇ ದುರ್ಗಾದೇವಿಗೆ ಪತ್ರ ಬರೆದಿರುವ ಬಗ್ಗೆ ಪರೋಕ್ಷವಾಗಿ ಶ್ರೀರಾಮುಲು ಅವರೇ ಒಪ್ಪಿಕೊಂಡಿದ್ದಾರೆ. ನನ್ನ ಮನಸ್ಸಿನಲ್ಲಿರುವುದನ್ನು ದೇವಿಯ ಬಳಿ ಬೇಡಿಕೊಂಡಿದ್ದೇನೆ. ದೇವಿ ಬಳಿ ಕೇಳಿಕೊಂಡಿದ್ದನ್ನು ಬಹಿರಂಗವಾಗಿ ಹೇಳಬಾರದು. ದೇವಿಯ ದರ್ಶನದಿಂದ ಒಳ್ಳೆಯದಾಗುತ್ತೆಂದು ಸ್ನೇಹಿತರು ಹೇಳಿದ್ದರು. ಹೀಗಾಗಿ ಗಡೇ ದುರ್ಗಾದೇವಿಯ ದರ್ಶನ ಪಡೆದಿದ್ದೇನೆ. ಡಿಸಿಎಂ ಮಾಡೋದು ಬಿಡೋದು ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟಿದ್ದು. ಡಿಸಿಎಂ ಪಟ್ಟದ ಬಗ್ಗೆ ಮಾತನಾಡುವ ಸಂದರ್ಭ ಇದಲ್ಲ. ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಸಂದರ್ಭವಿದು ಎಂದು ಹೇಳಿದ್ದಾರೆ.
ಸಚಿವ ರಾಮುಲು ಅವರು ರಾಜಕೀಯದ ಪದನ್ನೋತಿ ಸೇರಿದಂತೆ ಎಲ್ಲ ರೀತಿಯಿಂದ ಎಲ್ಲರಿಗೂ ಒಳಿತಾಗಲಿ ಎಂದು ಪತ್ರ ಬರೆದು ದೇವಿಯ ಮೂರ್ತಿಗೆ ಅರ್ಪಿಸಿ ಪೂಜೆ ಮಾಡಿಸಿದ್ದಾರೆ. ತಮ್ಮೊಂದಿಗೆ ಗರ್ಭಗುಡಿಯೊಳಗೆ ತೆರಳಿ ಪ್ರಾರ್ಥನೆಯನ್ನು ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವ ರಾಮುಲು ಅವರಿಗೆ ಉನ್ನತಸ್ಥಾನ ಸಿಗಲಿದೆ ಎಂದು ಅರ್ಚಕ ಮರಿಸ್ವಾಮಿ ಸಹ ಭವಿಷ್ಯ ನುಡಿದಿದ್ದಾರೆ.
ಡಿಸಿಎಂ ಸ್ಥಾನಕ್ಕಾಗಿ ದೇವರ ಮೊರೆ ಹೋದ ಸಚಿವ ಶ್ರೀರಾಮುಲು ಒಟ್ಟಿನಲ್ಲಿ ಡೆಪ್ಯುಟಿ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ ಮಸ್ಟ್ & ಕಂಪಲ್ಸರಿ ಎಂದು ಸಚಿವ ಶ್ರೀರಾಮುಲು ಪತ್ರದಲ್ಲಿ ಬರೆದು ದೇವಿಯ ಮೂರ್ತಿಗೆ ಅರ್ಪಿಸಿ ಪೂಜೆ ಮಾಡಿಸಿದ್ದು ಕೆಲ ಡಿಸಿಎಂ ಸ್ಥಾನದ ಅಕಾಂಕ್ಷಿಗಳಿಗೆ ತಲೆ ಬಿಸಿ ಉಂಟು ಮಾಡಿದೆಯಾ ಎಂಬ ಅನುಮಾನ ಶುರುವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ದೇವಿಯ ಕೃಪೆಯಿಂದ ರಾಮುಲುಗೆ ಯಾವ ಸ್ಥಾನ ಸಿಗಲಿದೆ ಎಂಬುದನ್ನು ಸಹ ಕಾದು ನೋಡಬೇಕಾಗಿದೆ.