ಯಾದಗಿರಿ: ನಾಗರ ಪಂಚಮಿ ಹಬ್ಬವನ್ನು ನಾಗಪ್ಪನಿಗೆ ಹಾಲೆರೆಯುವುದರ ಮೂಲಕ ಆಚರಿಸುವುದು ಸಾಮಾನ್ಯ. ಆದರೆ, ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಜನರು ಚೇಳುಗಳನ್ನು ಹಿಡಿದು ಅವುಗಳೊಂದಿಗೆ ಆಟವಾಡುತ್ತಾ, ಮೈಮೇಲೆಲ್ಲ ಬಿಟ್ಟುಕೊಂಡು ಆಚರಿಸುತ್ತಾರೆ.
ಈ ವಿಶಿಷ್ಟ ಪದ್ಧತಿಗಾಗಿ ಕಂದುಕೂರ ಗ್ರಾಮದ ಕೊಂಡಮ್ಮ ಬೆಟ್ಟಕ್ಕೆ ಬೀದರ್, ರಾಯಚೂರು, ಗುಲ್ಬರ್ಗಾ ಹಾಗು ಆಂಧ್ರಪ್ರದೇಶದ ಕೊಡಂಗಲ್, ತಾಂಡೂರ ಮುಂತಾದ ಕಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹೀಗೆ ಬಂದವರು ಚೇಳುಗಳನ್ನು ಹಿಡಿದು ಭಕ್ತಿ ಮೆರೆಯುತ್ತಾರೆ. ಸಾಯಂಕಾಲವಾಗುತ್ತಿದಂತೆ ಮಕ್ಕಳಿಂದ ಹಿಡಿದು ಹಿರಿಯರೆಲ್ಲರೂ ಬೆಟ್ಟ ಏರಿ ದೇವರ ದರ್ಶನ ಪಡೆದು ಚೇಳುಗಳು ಹಿಡಿಯುತ್ತಾರೆ. ಕೊಂಡಮ್ಮ ದೇವಿ ಪಕ್ಕಕ್ಕಿರುವ ಚೇಳು ಮೂರ್ತಿಗೆ ಹಾಲೆರೆಯುವುದೇ ಇಲ್ಲಿನ ವಿಶೇಷ. ಹಬ್ಬದಂದು ಯಾವುದೇ ಕಲ್ಲುಗಳನ್ನು ತೆಗೆದು ನೋಡಿದರೂ ಅಲ್ಲಿ ಚೇಳುಗಳು ಕಾಣಿಸುತ್ತವೆ. ನಿರ್ಭಯವಾಗಿ ಅವುಗಳನ್ನು ಹಿಡಿದು ಅವುಗಳೊಂದಿಗೆ ಜನರು ಆಟವಾಡುತ್ತಾರೆ. ಅಷ್ಟೇ ಏಕೆ, ಈ ಚೇಳುಗಳನ್ನು ಮುಖ, ಕೈ ಸೇರಿದಂತೆ ಮೈಮೇಲೆಲ್ಲ ಹರಿದಾಡಲು ಬಿಟ್ಟು ಆನಂದಿಸುತ್ತಾರೆ. ವಿಶೇಷ ಎಂದರೆ, ಇವುಗಳು ಯಾರಿಗೆ ಕಚ್ಚುವುದಿಲ್ಲ ಎನ್ನುತ್ತಾರೆ ಭಕ್ತರು.