ಯಾದಗಿರಿ: ಅನಧಿಕೃತವಾಗಿ ಅಳವಡಿಸಿದ್ದ ಅಂಬೇಡ್ಕರ್ ನಾಮಫಲಕವನ್ನು ತೆರವುಗೊಳಿಸಿರುವುದಕ್ಕೆ ಪೊಲೀಸರ ವಿರುದ್ದ ಪ್ರತಿಭಟನೆಯಲ್ಲಿ ತೊಡಗಿದ್ದ ಪ್ರತಿಭಟನಾಕಾರರನ್ನು ಪೊಲೀಸ್ ವರಿಷ್ಠಾಧಿಕಾರಿ, ಫೈರಿಂಗ್ ಡೈಲಾಗ್ ಮುಖಾಂತರ ತರಾಟೆಗೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದ ಎಸ್ಪಿ ಖುಷಿಕೇಶ್ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಭಗವಾನ್ ಪ್ರತಿಭಟನೆಯಲ್ಲಿ ನಿರತರಾದ ಕಾರ್ಯಕರ್ತರಿಗೆ ನಾವೇನು ಹುಚ್ಚರಾ ? ಪೊಲೀಸ್ ಇಲಾಖೆಯು ನಿಮಗೆ ಹುಚ್ಚರಂತೆ ಕಾಣುತ್ತಾ? ನಾವು ಸಾರ್ವಜನಿಕರಿಗಾಗಿ ಸೇವೆ ಸಲ್ಲಿಸುತ್ತಾ ಇದ್ದೇವೆ ಅನ್ನುವುದು ನಿಮಗೆ ಅರ್ಥವಾಗಲ್ವ ಎಂದು ಪ್ರಶ್ನಿಸಿದರು.
ಘಟನೆ ಹಿನ್ನೆಲೆ:
ಜಿಲ್ಲೆಯ ವಡಿಗೇರಾ ಪಟ್ಟಣದಲ್ಲಿ ಅಂಬೇಡ್ಕರ್ ನಾಮಫಲಕವನ್ನು ದಲಿತ ಸಂಘಟನೆಗಳ ಮುಖಂಡರು ಅನಧಿಕೃತವಾಗಿ ಅಳವಡಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತಕೊಂಡು ಅಂಬೇಡ್ಕರ್ ನಾಮಫಲಕವನ್ನು ತೆರವುಗೊಳಿಸಲಾಗಿತ್ತು.
ಆದ್ರೆ ದಲಿತ ಸಂಘಟನೆಗಳ ಮುಖಂಡರು ಅಂಬೇಡ್ಕರ್ ನಾಮಫಲಕವನ್ನು ತೆರವುಗೊಳಿಸುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ವಡಿಗೇರಾ ಪಟ್ಟಣದ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು. ಅಂಬೇಡ್ಕರ್ ನಾಮಫಲಕವನ್ನು ತೆರವುಗೊಳಿಸಿರುವುದಕ್ಕೆ ಕುರುಬ ಸಮುದಾಯದವರು ಪರೋಕ್ಷವಾಗಿ ಕಾರಣರಾಗಿದ್ದಾರೆ, ಹೀಗಾಗಿ ಪೊಲೀಸರು ಅಂಬೇಡ್ಕರ್ ನಾಮಫಲಕವನ್ನುತೆರವುಗೊಳಿಸಿದ್ದಾರೆ ಎಂದು ಪೊಲೀಸರ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ ಭಗವಾನ ಭೇಟಿ ನೀಡಿ ಪ್ರತಿಭಟನಾಕಾರರ ವಿರುದ್ದ ಗರಂ ಆದರು.