ಯಾದಗಿರಿ:ಒಂದೇ ವರ್ಷದಲ್ಲಿ ಮೂರು ಸಲ ಪ್ರವಾಹ ಬಂದಿದೆ. ಸೆಪ್ಟೆಂಬರ್ನಲ್ಲಿ ಉಂಟಾದ ಪ್ರವಾಹದಿಂದ 24 ಸಾವಿರ ಹೆಕ್ಟರ್ ಪ್ರದೇಶ ಬೆಳೆ ಹಾನಿ, ಅಕ್ಟೋಬರ್ನಲ್ಲಿ 45 ಸಾವಿರ ಹೆಕ್ಟರ್ ನಷ್ಟು ಬೆಳೆ ಹಾನಿ ಆಗಿದೆ.ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅತಿವೃಷ್ಟಿಯನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಯಾದಗಿರಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಯಾದಗಿರಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರ ಆಗಲಿ ಇಲ್ಲಿಯವರೆಗೆ ಒಂದೇ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹ ಬಂದಾಗ ಇಲ್ಲೇ ಇರಬೇಕಿತ್ತು. ಆದರೆ ಕಳೆದ ಮೇ ತಿಂಗಳಲ್ಲಿ ಬಂದು ಹೋದವರು ಇನ್ನು ಬಂದಿಲ್ಲ. ಕಂದಾಯ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಾಟಚಾರಕ್ಕೆ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಗಳು ನೆರೆ ಹಾನಿ ಆದ 10 ದಿನಗಳ ಬಳಿಕ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ.
ಅಧಿಕಾರಿಗಳ ಭೇಟಿ ಮಾಡಿ ಅಲ್ಪ-ಸ್ವಲ್ಪ ಮಾಹಿತಿ ಪಡೆದು ಹೋಗಿದ್ದಾರೆ. ಮುಖ್ಯಮಂತ್ರಿ ಬಂದು ಹೋಗಿದ್ದರೂ ಇಲ್ಲಿಯವರೆಗೆ ಪರಿಹಾರ ಮಾತ್ರ ಘೋಷಣೆ ಮಾಡಿಲ್ಲ ಅಂತ ಕಟುವಾಗಿ ಟೀಕಿಸಿದರು.
ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಅವರುಇದೀಗ ದುಡ್ಡಿಲ್ಲ ಅಂತ ಹೇಳುತ್ತಿದ್ದಾರೆ. 1 ಲಕ್ಷ 30 ಸಾವಿರ ಕೋಟಿ ಸಾಲ ಪಡೆದಿದ್ದಾರೆ. ಆದರೆ 4,500 ಕೋಟಿ ಕೊರೊನಾಗಾಗಿ ಖರ್ಚು ಮಾಡಿದ್ದಾರೆ. ಉಳಿದ ದುಡ್ಡು ಏನ್ ಮಾಡಿದ್ರು ಅಂತ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದರು. ಕೊರೊನಾ ನಿಭಾಯಿಸುವುದ್ದಕ್ಕೂ ಅವರಿಂದ ಆಗಿಲ್ಲ, ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದಿದ್ರು. ಈಗ ಅವರ ಮಗ ಬಹಳ ಮುಂದೆ ಹೋಗಿ RTGS ಮೂಲಕ ಲಂಚ ಪಡೆಯುತ್ತಿದ್ದಾರೆ. ಅತ್ಯಂತ ಭ್ರಷ್ಟ ಸರ್ಕಾರ ಇದು ಅಂತ ಆರೋಪಗಳ ಸುರಿಮಳೆ ಸುರಿಸಿದ್ರು.
ನಾವು ಆಡಳಿತ ಪಾರದರ್ಶಕವಾಗಿರಲಿ ಅಂತಿದ್ವಿ. ಆದ್ರೆ ಇವರು ಲಂಚ ಪಾರದರ್ಶಕವಾಗಿರಲಿ ಅಂತಿದ್ದಾರೆ ಅಂತ ಬಿಎಸ್ವೈ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದರು.