ಸುರಪುರ:ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಛಾಯಾ ಭಗವತಿ ದೇವಸ್ಥಾನದ ಸಮೀಪದ ಗುಡ್ಡದಲ್ಲಿ ಕಳೆದ ಐದು ದಿನಗಳಿಂದ ಸಿಲುಕಿಕೊಂಡಿದ್ದ ಕುರಿಗಾಹಿ ಟೋಪಣ್ಣನನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ.
ಛಾಯಾ ಭಗವತಿ ಗುಡ್ಡದಲ್ಲಿ ಸಿಲುಕಿದ್ದ ಕುರಿಗಾಹಿ ರಕ್ಷಿಸಿದ ಎನ್‌ಡಿಆರ್‌ಎಫ್ ತಂಡ - ಯಾದಗಿರಿ
ಯಾದಗಿರಿಯ ಹುಣಸಗಿ ತಾಲೂಕು ನಾರಾಯಣಪುರ ಸಮೀಪದ ಛಾಯಾ ಭಗವತಿ ಗುಡ್ಡದಲ್ಲಿ ಸಿಲುಕಿದ್ದ ಕುರಿಗಾಹಿ ಮತ್ತು ಶ್ವಾನವನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ.
ಕುರಿಗಾಹಿ ಟೋಪಣ್ಣ ಗುಡ್ಡದಲ್ಲಿ ಸಿಲುಕಿರುವುದನ್ನು ಕ್ಯಾಮರಾ ಮೂಲಕ ನಿನ್ನೆ ಪತ್ತೆ ಹಚ್ಚಲಾಗಿತ್ತು. ಇಂದು ಬೆಳಗ್ಗೆ ಆಗಮಿಸಿದ ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ಆರಂಭಿಸಿತ್ತು. ಸುಮಾರು ಎರಡು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ ಎನ್‌ಡಿಆರ್‌ಎಫ್ ತಂಡ, ಕುರಿಗಾಹಿ ಮತ್ತು ಜೊತೆಯಲ್ಲಿದ್ದ ಶ್ವಾನವನ್ನು ಬೋಟ್‌ನಲ್ಲಿ ಕರೆತಂದಿದೆ.
ಎನ್‌ಡಿಆರ್‌ಎಫ್ ತಂಡ ಟೋಪಣ್ಣನನ್ನು ಕರೆತರುತ್ತಿದ್ದಂತೆ ಛಾಯಾ ಭಗವತಿ ದೇವಸ್ಥಾನ ಬಳಿ ಆತಂಕದಿಂದ ಕಾಯುತ್ತಿದ್ದ ಶಾಸಕ ರಾಜುಗೌಡ ಸೇರಿದಂತೆ ಜನರು ಎನ್‌ಡಿಆರ್‌ಎಫ್ ತಂಡದ ಶ್ರಮವನ್ನು ಶ್ಲಾಘಿಸಿ, ಜೈಕಾರ ಕೂಗಿದರು. ಇದೇ ವೇಳೆ ಎನ್‌ಡಿಆರ್‌ಎಫ್ ತಂಡದ ಸಿಬ್ಬಂದಿಗೆ ಶಾಸಕ ರಾಜುಗೌಡ ಹೂಮಾಲೆ ಹಾಕಿ ಸನ್ಮಾನಿಸಿದರು. ಕುರಿಗಾಹಿಯನ್ನು ಡ್ರೋಣ್ ಕ್ಯಾಮರಾ ಮೂಲಕ ಪತ್ತೆ ಹಚ್ಚಿದ ಶಾಸಕರ ಸುಪುತ್ರ ಮಣಿಕಂಠಗೌಡ ಹಾಗೂ ಅಧಿಕಾರಿಗಳು ಇದ್ದರು.