ಗುರುಮಠಕಲ್(ಯಾದಗಿರಿ): ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿರುವ ಕೊಂಡಮೇಶ್ವರಿ ದೇವಸ್ಥಾನದ ಸುತ್ತಮುತ್ತಲಿನ ಬೆಟ್ಟದ ಪ್ರದೇಶದಲ್ಲಿ ಶ್ರಾವಣ ಮಾಸದ ಪಂಚಮಿ ದಿನ ಮಕ್ಕಳು ಹಾಗೂ ಭಕ್ತರು ಚೇಳುಗಳನ್ನು ಕೈಯಲ್ಲಿ ಹಿಡಿದು ಆಟವಾಡುತ್ತಾರೆ.
ಕಂದಕೂರು ಗ್ರಾಮದ ಸುತ್ತಲೂ ಹಚ್ಚ ಹಸುರಿನ ಬೆಟ್ಟ-ಗುಡ್ಡ. ಆ ಬೆಟ್ಟದ ಮಧ್ಯೆದಲ್ಲಿರುವುದೇ ಕೊಂಡಮಾಯಿ ದೇವಸ್ಥಾನ. ಇಲ್ಲಿ ಅಪರೂಪದ ಚೇಳಿನ ಮೂರ್ತಿ ಇಲ್ಲಿದೆ. ಈ ದೇವಿಯ ಕೃಪೆಯಿಂದ ನಾಗರ ಪಂಚಮಿ ದಿನ ಇಲ್ಲಿ ಹೇರಳವಾಗಿ ಚೇಳುಗಳು ಕಾಣಿಸುತ್ತವೆ. ಅವುಗಳನ್ನು ಹಿಡಿದು ಜನರು ಸಂಭ್ರಮ ಪಡುತ್ತಾರೆ. ವಿಶೇಷವೆಂದರೆ ಬೇರೆ ದಿನಗಳಲ್ಲಿ ಇಲ್ಲಿ ಚೇಳುಗಳು ಇರುವುದಿಲ್ಲವಂತೆ. ಗುಡಿಯಲ್ಲಿ ಚೇಳಿನ ಮೂರ್ತಿಗೆ ಪೂಜೆ ಸಲ್ಲಿಸುವುದರಿಂದ ಯಾರಿಗೂ ಕುಟುಕುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ವಿಶೇಷ ಪೂಜೆ:ಶ್ರಾವಣ ಮಾಸ ಶುಕ್ಲಪಕ್ಷದ ಪಂಚಮಿಯಂದು ನಾಗರ ಮೂರ್ತಿಗೆ ಹಾಲನೆರೆಯುವುದು ಸಾಮಾನ್ಯ. ಆದರೆ ಕಂದಕೂರು ಗ್ರಾಮಕ್ಕೆ ಹೊಂದಿಕೊಂಡಿರುವ ಕೊಂಡಮ್ಮ ಬೆಟ್ಟದ ಕೊಂಡಮೇಶ್ವರಿ ದೇವಸ್ಥಾನದಲ್ಲಿ ಚೇಳಿನ ಜೊತೆ ಮಕ್ಕಳು, ಭಕ್ತರು ಆಟವಾಡುವ ಮೂಲಕ ಚೇಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಚೇಳುಗಳ ಹುಡುಕಾಟ:ಜಾತ್ರೆಗೆ ಬಂದಿದ್ದ ಭಕ್ತರು ಬೆಟ್ಟದಲ್ಲಿ ಚೇಳುಗಳ ಹುಡುಕಾಟದಲ್ಲಿ ತೊಡಗಿದ್ದರು. ಕಲ್ಲುಗಳ ಸಂದಿನಲ್ಲಿ ಅಡಗಿಕೊಂಡಿದ್ದ ಚೇಳುಗಳನ್ನು ಹಿಡಿದು ಸಂಭ್ರಮಿಸಿದರು. ಮಹಿಳೆಯರು, ಮಕ್ಕಳು ತಮ್ಮ ಕೈಯಲ್ಲಿಡಿದು ಆಶ್ಚರ್ಯಚಕಿತಗೊಂಡರು. ಸುಮಾರು ಐದಾರು ದಶಕಗಳಿಂದ ಕಂದಕೂರ ಕೊಂಡಮಾಯಿ ಜಾತ್ರೆ ಜರುಗುತ್ತಿದೆ. ಗ್ರಾಮಕ್ಕೆ ಮಾತ್ರ ಸೀಮಿತವಾಗಿದ್ದ ಈ ಜಾತ್ರೆಗೆ ಏಳೆಂಟು ವರ್ಷಗಳಿಂದ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ.