ಯಾದಗಿರಿ :ಶಾಲಾ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿ, ಕರ್ತವ್ಯ ಲೋಪ ಎಸಗಿದ ಆರೋಪದಡಿ ಅನಪುರ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕನನ್ನು ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಗರಿಮಾ ಪನ್ವಾರ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ವರದಿ ಅನ್ವಯ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಅಮಾನತುಗೊಂಡವರು. ಶಾಲೆಯ ಮುಖ್ಯಶಿಕ್ಷಕರಿಗೆ ಕಳೆದ 2 ತಿಂಗಳ ಹಿಂದೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗೋಪಾಲರೆಡ್ಡಿ ಅವರು ಬುದ್ದಿವಾದ ಹೇಳಿದ್ದರು. ಆದರೂ ತಮ್ಮ ಚಾಳಿಯನ್ನು ಮುಖ್ಯಶಿಕ್ಷಕರು ಬಿಟ್ಟಿರಲಿಲ್ಲ. ಈ ವಿಚಾರ ಕಳೆದ 10 ದಿನಗಳ ಹಿಂದೆ ಪಾಲಕರಿಗೆ ಗೊತ್ತಾಗಿ ಶಿಕ್ಷಣ ಇಲಾಖೆಗೆ ಮೌಖಿಕವಾಗಿ ದೂರು ನೀಡಿದ ಹಿನ್ನೆಲೆ, ಬುಧವಾರ ತನಿಖಾ ತಂಡವು ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ವರದಿ ಮಾಡಿದೆ. ಬುಧವಾರ ರಾತ್ರಿ ವರದಿ ಅನ್ವಯ ಮುಖ್ಯಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಗುರುವಾರ ತಹಶೀಲ್ದಾರ್ ನೀಲಪ್ರಭಾ ಮತ್ತು ತಂಡವು ಶಾಲೆಗೆ ಭೇಟಿ ನೀಡಿ, ಇನ್ನಷ್ಟು ಮಾಹಿತಿ ಕಲೆ ಹಾಕಿಕೊಂಡರು.
ಮುಖ್ಯಗುರುಗಳು ತಮ್ಮ ಕಚೇರಿಗೆ ಕರೆಯಿಸಿಕೊಂಡು ಮೈ ಮುಟ್ಟುವುದು, ಕೆನ್ನೆ ಚಿವುಟುವುದು ಮತ್ತು ಅಶ್ಲೀಲ ಜೋಕ್ಸ್ ಹೇಳುವ ಮೂಲಕ ಅನುಚಿತವಾಗಿ ವರ್ತನೆ ಮಾಡುತ್ತಿದ್ದರು. ಇದರ ಬಗ್ಗೆ ನಮ್ಮ ಪಾಲಕರಿಗೆ ತಿಳಿಸಿದರೂ, ನಮ್ಮ ಮರ್ಯಾದೆ ಹೋಗುತ್ತೆ ಎಂದು ನಮ್ಮ ಬಾಯಿ ಮುಚ್ಚಿಸುತ್ತಿದ್ದರು. ಇದರ ಕುರಿತು ಬಾಯಿ ಬಿಡಬಾರದು ಅಂತಾ ಬೈಯುತ್ತಿದ್ದರು. ಶಾಲೆಗೆ ಹೋಗುವುದನ್ನ ಬಂದ್ ಮಾಡು. ಆದರೆ, ಈ ಬಗ್ಗೆ ಯಾರಿಗೂ ಹೇಳದಂತೆ ಸುಮ್ಮನೆ ಇರುವಂತೆ ನಮ್ಮ ಪಾಲಕರು ಒತ್ತಾಯಿಸುತ್ತಿದ್ದರು. ಈಗ ಅಧಿಕಾರಿಗಳು ಬಂದಿದ್ದಾರೆ. ನಮಗೆ ಆಗಿರುವ ಕಿರುಕುಳ ಕುರಿತು ಮೌಖಿಕವಾಗಿ ತಿಳಿಸಿದ್ದೇನೆ. ನಮ್ಮ ಶಾಲೆಯಲ್ಲಿ ಇಂತಹ ಮುಖ್ಯಗುರು ಇದ್ದಾರೆ. ಹೀಗಾಗಿ ಶಾಲೆಗೆ ಕಲಿಯಲು ಬರುವುದು ಬೇಡ ಎಂದು ನಿರ್ಣಯ ಮಾಡಿದ್ದೇನೆ ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿನಿಯೊಬ್ಬರು ತಮ್ಮ ಅಳಲು ತೋಡಿಕೊಂಡರು.
ಮುಖ್ಯ ಶಿಕ್ಷಕರ ವಿರುದ್ಧ ಕಠಿಣ ಕ್ರಮ : '' ಈ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿ ಎಫ್ಐಆರ್ ಮಾಡಲು ತಿಳಿಸಿದ್ದೇನೆ. ಇಲ್ಲದಿದ್ದರೆ ಪ್ರಭಾವಿಗಳ ಒತ್ತಡದಿಂದ ಈ ಕೇಸ್ ಮುಚ್ಚಿ ಹೋಗುತ್ತಿತ್ತು. ಹಿಂದೆ ಇದೇ ರೀತಿ ಹಲವು ಘಟನೆಗಳು ಜರುಗಿವೆ. ಅದು ಮರುಕಳಿಸಬಾರದು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ ಮುಖ್ಯ ಗುರುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದ್ದೇನೆ'' ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರು ಹೇಳಿದ್ದಾರೆ.
ಇದನ್ನೂ ಓದಿ :ಅನುಚಿತ ವರ್ತನೆ ಆರೋಪ: ಶಿಕ್ಷಕನನ್ನು ವರ್ಗಾಯಿಸುವಂತೆ ದೊಡ್ಡಘಟ್ಟ ಗ್ರಾಮಸ್ಥರ ಪಟ್ಟು