ಯಾದಗಿರಿ:ಇಂದು ನಾಡಿನಾದ್ಯಂತ ಸಡಗರ ಸಂಬ್ರಮದಿಂದ ನಾಗರ ಪಂಚಮಿ ಹಬ್ಬವನ್ನ ಆಚರಣೆ ಮಾಡಲಾಯಿತು. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ದಿನವನ್ನ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಪ್ರತಿವರ್ಷ ನಾಗರ ಪಂಚಮಿಯಂದು ವಿವಿಧ ಗ್ರಾಮಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಎತ್ತಿನ ಬಂಡಿ ಓಟದ ಸ್ಪರ್ಧೆ, ಭಾರದ ಕಲ್ಲುಗಳ ಎತ್ತುವ ಮತ್ತು ಎತ್ತಿಗಳಿಗೆ ಕಟ್ಟಿ ಓಡಿಸುವ ಸ್ಪರ್ಧೆಗಳು ಸೇರಿದಂತೆ ವಿವಿಧ ಸ್ಪರ್ಧೆಗಳ ಏರ್ಪಡಿಸಲಾಗುತ್ತದೆ. ಅದರಂತೆ ಜಿಲ್ಲೆಯಲ್ಲೂ ಈ ಬಾರಿ ವಿಶೇಷವಾಗಿ ಪುರುಷರಿಗಾಗಿ ವಿಭಿನ್ನ ಟ್ರ್ಯಾಕ್ಟರ್ ಅನ್ನು ಹಿಮ್ಮುಖವಾಗಿ ಚಲಾಯಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ದೋರನಹಳ್ಳಿ ಗ್ರಾಮದ ಬಸಲಿಂಗಪ್ಪ ಹುರಸಗುಂಡಗಿ ಎಂಬವರು ಗೆದ್ದು ಸಂಭ್ರಮಿಸಿದರು.
ಸ್ಪರ್ಧೆ ಗೆದ್ದ ಸಾಹಸಿ ಬಸಲಿಂಗಪ್ಪ ಅವರಿಗೆ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ.ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಬಸಲಿಂಗಪ್ಪ ವಿಜಯಪುರ-ಹೈದರಾಬಾದ್ ಹೆದ್ದಾರಿಯಲ್ಲಿ ಬರುವ ದೋರನಹಳ್ಳಿ ಗ್ರಾಮದಿಂದ ಯಾದಗಿರಿ ಹೊರವಲಯದ ವಡಗೇರಿ ಕ್ರಾಸ್‌ವರೆಗೆ ಟ್ರ್ಯಾಕ್ಟರ್ ಅನ್ನು ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಒಂದು ತಾಸು 43 ನಿಮಿಷದಲ್ಲಿ ಗುರಿ ತಲುಪಿದ್ದಾನೆ. ಇನ್ನೋರ್ವ ಸ್ಪರ್ಧಿ ಪರಶುರಾಮ ಟೋಕಾಪುರ ಎಂಬವರು 1 ತಾಸು 45 ನಿಮಿಷದಲ್ಲಿ ಇದೇ ದೂರವನ್ನು ಕ್ರಮಿಸಿದರು. ಅಂತಿಮವಾಗಿ 2 ನಿಮಿಷ ಮೊದಲು ತಲುಪಿದ ಬಸಲಿಂಗಪ್ಪ ಹುರಸಗುಂಡಿಗಿ ಅವರನ್ನು ವಿಜೇತರನ್ನಾಗಿ ಘೋಷಿಸಲಾಯಿತು ಎಂದು ತಿಳಿಸಿದರು.
ಸುಮಾರು 24 ಕಿ.ಮೀ ದೂರವನ್ನು ಬಸಲಿಂಗಪ್ಪ ಹುರಸಗುಂಡಗಿ ಅವರು ಅತ್ಯಂತ ತ್ವರಿತವಾಗಿ ತಲುಪಿ ಗೆಲುವಿನ ಕೇಕೆ ಹಾಕಿದರು. ಬೆಂಬಲಿಗರು ಶಿಳ್ಳೆ ಹಾಕಿ, ಶಾಲುಗಳಿಂದ ಸನ್ಮಾನಿಸಿ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.