ಯಾದಗಿರಿ: ನಗರದಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದ ಯುವತಿಯನ್ನು ಇಬ್ಬರು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದ ಆಪಾದನೆ ಕೇಳಿಬಂದಿದೆ. ಇದರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಘಟನೆಯು ಜಿಲ್ಲೆಯ ಸುರಪುರ ತಾಲೂಕಿನ ಅಂಬ್ಲಿಹಾಳ ಗ್ರಾಮದಲ್ಲಿ ನಡೆದಿದ್ದು, ಆತ್ಮೆಹತ್ಯೆ ಮಾಡಿಕೊಂಡವರು ವಿಜಯಲಕ್ಷ್ಮಿ ಎಂಬುವವರು ಎಂದು ತಿಳಿದುಬಂದಿದೆ. ಈ ಯುವತಿ ಮಾರ್ಚ್ 21ರಂದು ಯಾದಗಿರಿ ನಗರದ ಖಾಸಗಿ ಕಾಲೇಜು ಒಂದರಲ್ಲಿ ಪಿಯುಸಿ ಪೂರ್ವಭಾವಿ ಪರೀಕ್ಷೆಗೆ ಹೋಗಿದ್ದಳು. ಈ ವೇಳೆ ಮಹೇಶ್ ಮತ್ತು ಅನಿಲ ಎಂಬುವವರು ಜೀವ ಬೆದರಿಕೆ ಹಾಕಿ ಆಕೆಯನ್ನು ಅಪಹರಿಸಿದ್ದಾರೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಋಷಿಕೇಶ್ ಭಗವಾನ ಸೋನಾವಣೆ ಅತ್ಯಾಚಾರ ಎಸಗಿದ ಮಹೇಶ ಮತ್ತು ಅನಿಲ್ ತಂದೆ ರಾಜಣ್ಣಾ ಮತ್ತು ದೇವೇಂದ್ರಪ್ಪ ಎಂಬುವವರ ವಿರುದ್ಧ, ಕೃತ್ಯಕ್ಕೆ ಸಹಕರಿಸಿದ ಆಪಾದನೆಯಡಿ ಈ ಇಬ್ಬರ ಮೇಲು ಪ್ರಕರಣ ದಾಖಲಾಗಿದೆ.
ವಿಜಯಲಕ್ಷ್ಮಿಯ ಮೇಲೆ ಅತ್ಯಾಚಾರ ನಡೆದ ನಂತರ ರಾಜಣ್ಣಾ ಮತ್ತು ದೇವೇಂದ್ರಪ್ಪ ಆ ಯುವತಿಯನ್ನ ಮಾರ್ಚ್ 22ರಂದು ಅಂಬ್ಲಿಹಾಳ ಗ್ರಾಮದಲ್ಲಿರುವ ಆಕೆಯ ಮನೆಗೆ ಬಿಟ್ಟಿದ್ದಾರೆ. ಯುವತಿಯ ಪೋಷಕರ ಮೇಲೆ ಜೀವಬೆದರಿಕೆ ಹಾಕಿದ್ದಾರೆ ಎಂದು ಮೃತ ಯುವತಿಯ ಪೋಷಕರು ದೂರು ಸಲ್ಲಿಸಿದ್ದಾರೆ.
ಘಟನೆಯಿಂದ ಮನನೊಂದ ವಿಜಯಲಕ್ಷ್ಮಿ ಮನೆಯಲ್ಲಿದ್ದ ಪೇಯಿಂಟ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಆಕೆಯನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾಳೆ.
ಪ್ರಕರಣದ ಆರೋಪಿಗಳಾದ ಮಹೇಶ್ ಮತ್ತು ಅನಿಲ ಪರಾರಿಯಾಗಿದ್ದು, ರಾಜಣ್ಣಾ ಮತ್ತು ದೇವೇಂದ್ರಪ್ಪ ಅವರನ್ನು ಯಾದಗಿರಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ಕುರಿತು ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು ಎಂದು ಯಾದಗಿರಿ ಎಸ್ಪಿ ಋಷಿಕೇಶ್ ಭಗವಾನ ಸೋನಾವಣೆ ತಿಳಿಸಿದ್ದಾರೆ.