ಸುರಪುರ: ರಾಮ್ ಸೇನಾ ಸಂಘಟನೆಯಿಂದ ಸುರಪುರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಮಧ್ಯಾಹ್ನ 12 ಗಂಟೆಯ ಸುಮಾರಿಗೆ ತಹಶೀಲ್ದಾರ್ ಕಚೇರಿ ಮುಂದೆ ರಾಮ್ ಸೇನಾ ತಾಲೂಕು ಅಧ್ಯಕ್ಷ ಶರಣು ನಾಯಕ ಡೊಣ್ಣಿಗೇರಾ ನೇತೃತ್ವದಲ್ಲಿ ಸೇರಿದ 50ಕ್ಕೂ ಹೆಚ್ಚು ಜನ ಕಾರ್ಯಕರ್ತರು, ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಪೊಲೀಸರ ಮೇಲಿನ ಹಲ್ಲೆಯನ್ನು ಖಂಡಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಸುರಪುರದಲ್ಲಿ ರಾಮ್ ಸೇನಾ ಸಂಘಟನೆ ಪ್ರತಿಭಟನೆ ಈ ಸಂದರ್ಭದಲ್ಲಿ ರಾಮ್ ಸೇನಾ ಪ್ರಧಾನ ಕಾರ್ಯದರ್ಶಿ ಶರಣು ನಾಯಕ ದೀವಳಗುಡ್ಡ ಮಾತನಾಡಿ, ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಬೆಂಗಳೂರು ಗಲಭೆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯವಾಗಿದೆ. ದಾಳಿಗೆ ಕಾರಣರಾದ ಎಲ್ಲರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಲ್ಲದೆ ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಧಾರವಾಡದ ಬೇಗೂರು ಗ್ರಾಮದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದರು.
ನಂತರ ಗ್ರೇಡ್-2 ತಹಶೀಲ್ದಾರ್ ಸೋಫಿಯಾ ಸುಲ್ತಾನರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸೇನೆಯ ಗೌರವಾಧ್ಯಕ್ಷ ಕುಮಾರ್ ನಾಯಕ, ಕಾರ್ಯದರ್ಶಿ ಹಯ್ಯಾಳಪ್ಪ, ಹಾದಿಮನಿ ಅನಿಲ್ ಬಿಳ್ಹಾರ್, ಗುರುನಾಥ್ ಶೀಲವಂತ ಸೇರಿದಂತೆ ಅನೇಕರಿದ್ದರು.