ಯಾದಗಿರಿ: ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ವಡಗೇರಾ ತಾಲೂಕಿನ ಉಳ್ಳೆಸೂಗೂರು ಗ್ರಾಮದಲ್ಲಿ ನಡೆದಿದೆ.
ಉಳ್ಳೆಸೂಗೂರು ಗ್ರಾಮ ಪಂಚಾಯಿತಿ ಒಟ್ಟು 20 ಜನ ಸದಸ್ಯ ಬಲ ಹೊಂದಿದ್ದು, 11 ಕಾಂಗ್ರೆಸ್ ಬೆಂಬಲಿತ ಹಾಗೂ 9 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಳಿಕ ಮಾರಾಮಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಬಳಿಕ ನಡೆದ ಮೆರವಣಿಗೆ ವೇಳೆ ಗಲಾಟೆ ನಡೆದು ಪರಸ್ಪರ ಕಲ್ಲು ತುರಾಟ ನಡೆಸಲಾಗಿದೆ. ಘಟನೆಯಲ್ಲಿ 12 ಕಾರುಗಳು ಹಾಗೂ 30ಕ್ಕೂ ಅಧಿಕ ಬೈಕ್ಗಳು ಜಖಂಗೊಂಡಿವೆ.
ಸ್ಥಳಕ್ಕೆ ವಡಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಸ್ಪತ್ರೆ ಎದರುಗಡೆ ಪ್ರತಿಭಟನೆ ನಡೆಸಿದ್ದು, ಘಟನೆಗೆ ಕಾರಣರಾದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.